

ಮಂಡ್ಯ: ರಾಜ್ಯಸರ್ಕಾರದ ಗ್ಯಾರಂಟಿ ಯೋಜನೆಯನ್ನು ಶೇ.100ರಷ್ಟು ಅನುಷ್ಠಾನಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿಕ್ಕಲಿಂಗಯ್ಯ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಡ ಜನರಿಗೆ ಗ್ಯಾರಂಟಿ ಯೋಜನೆಗಳು ಶಕ್ತಿಯನ್ನು ತುಂಬಿದೆ. ಇಂತಹ ಒಂದು ಮಹತ್ವಾಕಾಂಕ್ಷೆಯ ಯೋಜನೆಯ ಬಗ್ಗೆ ಸಾರ್ವಜನಿಕವಾಗಿ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದರು.
ಗೃಹಲಕ್ಷ್ಮೀ ಯೋಜನೆಯಡಿ 45 ಲಕ್ಷಕ್ಕೂ ಹೆಚ್ಚು ಅರ್ಹ ಫಲಾನುಭವಿಗಳಿದ್ದಾರೆ. ಅಕ್ಟೋಬರ್ ಮಾಹೆವರೆಗೆ ಶೇ.99.28ರಷ್ಟು ಮಹಿಳೆಯರಿಗೆ ಹಣ ವರ್ಗಾವಣೆ ಮಾಡಲಾಗಿದೆ. ನವೆಂಬರ್ ಮತ್ತು ಡಿಸೆಂಬರ್ ಮಾಹೆಯ ಹಣವನ್ನು ಈಗಾಗಲೇ ಬಿಡುಗಡೆಗೊಳಿಸಿದ್ದು, ಶೀಘ್ರವೇ ಅರ್ಹ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ. ಇನ್ನು ಐಟಿ/ಜಿಎಸ್‌ಟಿ ತೆರಿಗೆದಾರರಲ್ಲವೆಂದು 1,246 ಫಲಾನುಭವಿಗಳು ದೃಢೀಕರಣ ನೀಡಿದ್ದಾರೆ. ಇದನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಹಳ್ಳಿಗಳಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಇನ್ನೂ ನೋಂದಣಿಯಾಗದವರ ಮಾಹಿತಿ ಕಲೆಹಾಕಿ. ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ಸಮಸ್ಯೆಯಿದ್ದಲ್ಲಿ ಶೀಘ್ರವಾಗಿ ಬಗೆಹರಿಸಿ ಯೋಜನೆ ತಲುಪಿಸುವಂತೆ ಕ್ರಮ ಕೈಗೊಳ್ಳಿ ಎಂದರು.
ಅನ್ನಭಾಗ್ಯ ಯೋಜನೆಯಡಿ 44 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳಿದ್ದಾರೆ. ಈ ನಿಟ್ಟಿನಲ್ಲಿ ನ್ಯಾಯಬೆಲೆ ಅಂಗಡಿಯ ಮಾಲೀಕರು ಸರ್ಕಾರ ನಿಗದಿಪಡಿಸಿರುವ ಸಮಯದಲ್ಲಿ ಪಡಿತರ ವಿತರಣೆ ಮಾಡುತ್ತಿದ್ದಾರೆಯೇ, ಸರಿಯಾದ ಪ್ರಮಾಣದಲ್ಲಿ ತೂಕ ಮಾಡಿ ಪಡಿತರ ನೀಡಲಾಗುತ್ತಿದೆಯೇ ಎಂದು ತಾಲೂಕು ಮಟ್ಟದ ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ನ್ಯಾಯಬೆಲೆ ಅಂಗಡಿ ಮಾಲೀಕರು ಅನಧಿಕೃತವಾಗಿ ಹಣ ವಸೂಲಿ ಮಾಡುತ್ತಿದ್ದಲ್ಲಿ ಅಥವಾ ಗ್ರಾಹಕರ ಮೇಲೆ ದರ್ಪ ತೋರುತ್ತಿದ್ದಲ್ಲಿ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರತಿ ನ್ಯಾಯಬೆಲೆ ಅಂಗಡಿಯ ಮುಂದೆ ಸಹಯವಾಣಿ ಸಂಖ್ಯೆಯನ್ನು ಅನಾವರಣಗೊಳಿಸಬೇಕು ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಯಡಿ ಫೆಬ್ರವರಿ ಮಾಹೆಯಿಂದ ನಗದು ಬದಲು ಅಕ್ಕಿ ವಿತರಿಸಲು ಸರ್ಕಾರ ತೀರ್ಮಾನ ಕೈಗೊಂಡಿರುವುದರಿಂದ ಫೆಬ್ರವರಿ ಮಾಹೆಯ ಹೆಚ್ಚುವರಿ ಅಕ್ಕಿಯನ್ನು ಮಾರ್ಚ್ ಮಾಹೆಯಲ್ಲಿ ವಿತರಿಸಲಾಗುವುದು. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಡಿಸೆಂಬರ್ ಮಾಹೆಯಿಂದ ಫೆಬ್ರವರಿ ಮಾಹೆಯವರೆಗೂ 1.80 ಕೋಟಿ ಅಧಿಕ ಟಿಕೆಟ್‌ಗಳನ್ನು ಮಹಿಳಾ ಪ್ರಯಾಣಿಕರಿಗೆ ನೀಡಲಾಗಿದೆ. ಪರೀಕ್ಷಾ ಸಮಯವಾದ್ದರಿಂದ ಚಾಲಕರು ಹಾಗೂ ನಿಯಂತ್ರಕರು ವಿಶೇಷ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ಕೋರಿಕೆ ನಿಲುಗಡೆ ನೀಡುವ ವ್ಯವಸ್ಥೆ ಆಗಬೇಕು ಎಂದರು.
ಜಿಲ್ಲೆಯಲ್ಲಿ ಗೃಹಜೋತಿ ಯೋಜನೆಯಡಿ ಸುಮಾರು 5 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳಿದ್ದು, ಈ ಯೋಜನೆಯನ್ನು ಶೇ.97.09 ರಷ್ಟು ಯೋಜನೆ ತಲುಪಿಸಲಾಗಿದೆ. ಯುವನಿಧಿ ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ತಾಲೂಕುವಾರು ತಂಡ ರಚಿಸಿ ಪದವಿ ವೃತ್ತಿಪರ ಕಾಲೇಜಿಗೆ ಭೇಟಿ ನೀಡಿ ಪ್ರಚಾರ ಪಡಿಸಿ, ಈಗಾಗಲೇ ಜನವರಿ ಮಾಹೆವರೆಗೆ ಒಟ್ಟು 3,998 ಅರ್ಹ ಫಲಾನುಭವಿಗಳಿಗೆ ಹಣ ಡಿ.ಬಿ.ಟಿ ಮೂಲಕ ವರ್ಗಾವಣೆಯಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಪ್ರಾಧಿಕಾರ ಉಪಾಧ್ಯಕ್ಷರಾದ ಕೆ.ಸಿ.ಪ್ರಶಾಂತ್‌ಬಾಬು, ಎಸ್.ಎಚ್.ರಾಜೇಂದ್ರ, ಶಿವಣ್ಣ, ಕೆ.ಹನುಮಂತಯ್ಯ, ಜಿಪಂ ಮುಖ್ಯ ಯೋಜನಾಧಿಕಾರಿ ಎಸ್.ಧನುಷ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಮೂರ್ತಿ ಇತರರಿದ್ದರು.