

ವ್ಯವಸ್ಥಿತವಾಗಿ ದಸರಾ ಮಹೋತ್ಸವ ಆಯೋಜಿಸಲು ದಸರಾ ಪ್ರಾಧಿಕಾರದ ಅವಶ್ಯಕತೆ ಇದೆ ಎಂದು ಉದ್ಯಮಿ ಲಕ್ಷ್ಮಣ್ ತಿಳಿಸಿದ್ದಾರೆ.
ದಸರಾ ಮುಗಿದ ಬಳಿಕ ಮುಂದಿನ ದಸರಾ ಕುರಿತು ಸಿದ್ಧತೆಗಳು ನಡೆದು ವರ್ಷವಿಡೀ ಪ್ರಚಾರ ಮಾಡಿಕೊಂಡು ವ್ಯವಸ್ಥಿತವಾಗಿ ನಾಡಹಬ್ಬವನ್ನು ಆಯೋಜಿಸಬೇಕು. ಅದಕ್ಕಾಗಿ ದಸರಾ ಪ್ರಾಧಿಕಾರ ರಚನೆ ಅಗತ್ಯವಿದೆ.
ದಸರಾ ಪ್ರಾಧಿಕಾರ ರಚನೆಯಾದರೆ ಬಹಳಷ್ಟು ಅನುಕೂಲವಾಗುತ್ತದೆ. ಇದರಲ್ಲಿ ಸಾಂಸ್ಕೃತಿಕ, ನಾಟಕ, ಜಾನಪದ ಸೇರಿದಂತೆ ವಿವಿಧ ಪ್ರದರ್ಶನ ಕಲೆಗಳ ಪರಿಣತರನ್ನು ಸೇರಿಸಿಕೊಂಡು ಕಾರ್ಯೋನ್ಮುಖವಾಗಬಹುದು. ಇದರಿಂದ ಮೈಸೂರು ಪ್ರವಾಸೋದ್ಯಮಕ್ಕೆ ಚೈತನ್ಯ ಬರಲಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಯೋಚಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ದಸರಾ ಪ್ರಾಧಿಕಾರ ರಚನೆಯಾಗಲೇಬೇಕು.
ದಸರಾ ಪ್ರಾಧಿಕಾರ ರಚನೆಯಿಂದ ಸರ್ಕಾರಕ್ಕೆ ಅಂತಹ ಹೊರೆಯೇನೂ ಆಗಲ್ಲ. ಪ್ರಾಧಿಕಾರ ರಚನೆಯಾದರೆ ವರ್ಷವಿಡೀ ವಿವಿಧ ಚಟುವಟಿಕೆಗಳಿಂದ ಜೀವಂತ ಇರಲು ಸಾಧ್ಯವಾಗುತ್ತದೆ. ದಸರೆ ಸುತ್ತ ಕಮೀಷನ್, ವಾಣಿಜ್ಯೀಕರಣ, ಲಾಬಿ ಇನ್ನಿತರ ವ್ಯವಹಾರವೇ ತುಂಬಿಕೊಂಡಿದೆ. ದಸರೆಯ ನಿಜವಾದ ಸೊಗಡು ಮಂಕಾಗಿದೆ. ಆದ್ದರಿಂದ ವ್ಯವಸ್ಥಿತ, ಶಿಸ್ತುಬದ್ಧ, ಯೋಜನಾಬದ್ಧವಾಗಿ ದಸರೆ ಆಯೋಜನೆಗೆ ರಾಜ್ಯ ಸರ್ಕಾರ ಶಾಶ್ವತ ವ್ಯವಸ್ಥೆ ಮಾಡಬೇಕು. ಸ್ಪಷ್ಟ ಉದ್ದೇಶವನ್ನು ಇಟ್ಟುಕೊಂಡು ದಸರಾ ಪ್ರಾಧಿಕಾರ ರಚನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.