ಡೆಂಘೆ ನಿಯಂತ್ರಣಕ್ಕೆ ಅಧಿಕಾರಿಗಳು ಪಣತೊಡಬೇಕು

11 ckm 7
ಚಿಕ್ಕಮಗಳೂರಿನ ಡಿಸಿ ಕಚೇರಿ ಸಭಾಂಗಣದಲ್ಲಿ ಡಿಸಿ ಮೀನಾ ನಾಗರಾಜ್ ಅಧ್ಯಕ್ಷತೆಯಲ್ಲಿ ನಡೆದ ಡೆಂಘೆ ನಿಯಂತ್ರಣ ಸಂಬAಧ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಡೆಂಘೆ ನಿರೋಧಕ ಕ್ರೀಮ್‌ಗಳನ್ನು ಬಿಡುಗಡೆಗೊಳಿಸಲಾಯಿತು. ಜಿಪಂ ಸಿಇಒ ಡಾ.ಗೋಪಾಲಕೃಷ್ಣ, ಎಸ್‌ಪಿ ವಿಕ್ರಮ್ ಅಮಟೆ, ಡಿಎಚ್‌ಒ ಡಾ.ಅಶ್ವಥ್ ಬಾಬು ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಡೆಂಘೆ ನಿಯಂತ್ರಣಕ್ಕೆ ಪ್ರತಿಯೊಬ್ಬ ಇಲಾಖಾಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಡೆಂಘೆ ನಿಯಂತ್ರಣ ಸಂಬAಧ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿ ಡೆಂಘೆ ನಿಯಂತ್ರಣದ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೇರಿದಂತೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತರು, ಜೊತೆಗೂಡಿ ಗ್ರಾಮಗಳ ನೈರ್ಮಲ್ಯ ಕಾಪಾಡುವುದರ ಜೊತೆಗೆ ಚರಂಡಿ ಮತ್ತು ಸುತ್ತ ಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಮೂಲಕ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಜನರಲ್ಲಿ ಅರಿವು ಮೂಡಿಸಬೇಕು. ಡೆಂಘೆ ಕಾರಕ ಈಡಿಸ್ ಸೊಳ್ಳೆ ಮನೆ ಒಳಗಡೆ ಇರುತ್ತದೆ. ಹಾಗಾಗಿ ಮನೆ ಒಳಗೆ ಫಾಗಿಂಗ್ ಹಾಗೂ ಸೊಳ್ಳೆ ನಿರೋಧಕಗಳನ್ನು ಬಳಸಿ ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವತ್‌ಬಾಬು ಮಾತನಾಡಿ, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಇತರೆ ಎಲ್ಲ ಇಲಾಖೆಗಳು ಒಗ್ಗೂಡಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಅರಿವು ಮೂಡಿಸುವ ಜೊತೆಗೆ ಹೆಚ್ಚು ಹೆಚ್ಚು ಫಾಗಿಂಗ್ ಮಾಡಲಾಗುತ್ತಿದೆ. ನೀರು ನಿಲ್ಲುವ ಸ್ಥಳಗಳಲ್ಲಿ ಸೊಳ್ಳೆ ನಿರೋಧಕ ಔಷಧಗಳನ್ನು ಸಿಂಪಡಿಸಲಾಗುತ್ತಿದೆ. ಡೆಂಘೆ ರೋಗ ಬರದ ಹಾಗೆ ಎಚ್ಚರ ವಹಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಜಿಪಂ ಸಿಇಒ ಡಾ. ಗೋಪಾಲಕೃಷ್ಣ, ಎಸ್‌ಪಿ ವಿಕ್ರಮ ಅಮಟೆ, ಜಿಲ್ಲಾ ಸರ್ಜನ್ ಡಾ. ಮೋಹನ್ ಕುಮಾರ್ ಸೇರಿದಂತೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳು ಮತ್ತಿತರ ಅನುಷ್ಠಾನಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net