

ಮಂಗಳೂರು: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗ ವತಿಯಿಂದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಹಯೋಗದಲ್ಲಿ ಆ.19ರಂದು ಮಧ್ಯಾಹ್ನ 3 ಗಂಟೆಗೆ ಉಜಿರೆಯ ಶ್ರೀ ಸಿದ್ಧವನ ಗುರುಕುಲದಲ್ಲಿ ಪ್ರೇರಣಾ ದಿನ ಮತ್ತು ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ.
ಶ್ರೀಧರ್ಮಸ್ಥಳ ಎಜ್ಯುಕೇಶನಲ್ ಸೊಸೈಟಿ ಕಾರ್ಯದರ್ಶಿ ಪ್ರೊ.ಎಸ್.ಸತೀಶ್ ಚಂದ್ರ ಅವರು ಉದ್ಘಾಟಿಸಲಿದ್ದು, ಎಸ್‌ಡಿಎಂ ಕಾಲೇಜು ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಕೆ.ಪ್ರತಾಪ ಸಿಂಹ ನಾಯಕ್ ಮತ್ತು ಕೆ. ಹರೀಶ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘದ ಜಂಟಿ ಪ್ರಧಾನ ಕಾರ್ಯದರ್ಶಿ ಡಾ.ಮಾಧವ ಎಂ.ಕೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉತ್ತಮ ಜೀವಮಾನ ಸಾಧನೆಗಾಗಿ ಶ್ರೀಧರ್ಮಸ್ಥಳ ಎಜ್ಯುಕೇಶನ್ ಸೊಸೈಟಿಯ ಸ್ಥಾಪಕ ಪ್ರಾಂಶುಪಾಲ ಮತ್ತು ವಿಶ್ರಾಂತ ಕಾರ್ಯದರ್ಶಿ ಪ್ರೊ.ಎಸ್.ಪ್ರಭಾಕರ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಕಾಲೇಜು ಶಿಕ್ಷಣ ಇಲಾಖೆ ಹೆಚ್ಚುವರಿ ನಿರ್ದೇಶಕ ಪ್ರೊ.ಎಸ್.ರಾಜಶೇಖರ್ ಹೆಬ್ಬಾರ್ ಅವರಿಗೆ ಅತ್ಯುತ್ತಮ ಆಡಳಿತಗಾರ, ಮಂಗಳೂರು ವಿವಿ ವಸ್ತು ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಪ್ರೊ. ಮಂಜುನಾಥ ಪಟ್ಟಾಭಿ ಅವರಿಗೆ ಅತ್ಯುತ್ತಮ ಸಂಶೋಧಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿ ಭೌತಶಾಸ ವಿಭಾಗ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಡಾ.ನಾಗರಾಜ ಕೆ.ಪಿ. ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ, ಸಂತ ಆಗ್ನೆಸ್ ಕಾಲೇಜಿನ ಡಾ.ವಿಶಾಲಾ ಬಿ.ಕೆ. ಅವರಿಗೆ ಅತ್ಯುತ್ತಮ ಗ್ರಂಥ ಪಾಲಕಿ ಪ್ರಶಸ್ತಿ ಮತ್ತು ಉಡುಪಿಯ ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರ.ದ.ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡಾ.ರಾಮಚಂದ್ರ ಪಾಟ್ಕರ್ ಅರೊಗೆ ಅತ್ಯುತ್ತಮ ದೈಹಿಕ ಶಿಕ್ಷಣ ನಿರ್ದೇಶಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಮಂಗಳೂರು ವಿವಿ ವಿಭಾಗದ ಕಾರ್ಯದರ್ಶಿ ವೆಂಕಟೇಶ್ ನಾಯಕ್, ಖಜಾಂಚಿ ಆಶಾಲತಾ, ಪ್ರೇರಣಾ ದಿನದ ಸಂಯೋಜಕಿ ಡಾ. ರತಿ, ವಾಣಿ ಮತ್ತು ರಾಜೇಶ್ ಉಪಸ್ಥಿತರಿದ್ದರು.