

ಶಿವಮೊಗ್ಗ: ಒಂದರಿಂದ ಎಸ್ಸೆಸ್ಸೆಲ್ಸಿವರೆಗಿನ ಶಾಲಾ ಮಕ್ಕಳಿಗೆ ವಾರಕ್ಕೆ ಎರಡು ದಿನ ಮೊಟ್ಟೆ ನೀಡುವ ಕಾರ್ಯಕ್ರಮವನ್ನು ಆ.18ರಂದು ಮಂಡ್ಯದಲ್ಲಿ ಚಾಲನೆ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ತಿಳಿಸಿದರು.
ಇದುವರೆಗೆ ವಾರದಲ್ಲಿ ಒಂದು ದಿನ ಮಾತ್ರ ಮೊಟ್ಟೆ ವಿತರಿಸಲಾಗುತ್ತಿತ್ತು. ಇದೀಗ ಎರಡು ದಿನ ನೀಡಲು ನಿರ್ಧರಿಸಲಾಗಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಶೇಂಗಾ ಚಿಕ್ಕಿ ಅಥವಾ ಬಾಳೆಹಣ್ಣು ವಿತರಿಸಲಾಗುವುದು. ರಾಜ್ಯದ 60 ಲಕ್ಷ ಮಕ್ಕಳು ಈ ಯೋಜನೆಯಡಿಯಲ್ಲಿ ಬರಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಎರಡು ವರ್ಷಗಳಲ್ಲಿ ಶಿಕ್ಷಣ ಇಲಾಖೆಯನ್ನು ಮತ್ತಷ್ಟು ಬಲಿಷ್ಟಗೊಳಿಸಲು ಉದ್ದೇಶಿಸಲಾಗಿದೆ. ಶಾಲಾ ಕಟ್ಟಡಗಳ ದುರಸ್ತಿ, ಹೊಸ ಕಟ್ಟಡಗಳ ನಿರ್ಮಾಣ, ಶಾಲೆಗಳ ಉನ್ನತೀಕರಣ, ಕಾಲೇಜುಗಳ ಸ್ಥಾಪನೆ ಸೇರಿ ಅನೇಕ ಮಹತ್ವದ ಬದಲಾವಣೆಗೆ ಒತ್ತು ನೀಡಲಾಗುವುದು ಎಂದರು.
ಶೈಕ್ಷಣಿಕವಾಗಿ ಅನುತ್ತೀರ್ಣರಾದ ಮಕ್ಕಳಿಗೆ ಪುನರ್ ಅವಕಾಶ ಕಲ್ಪಿಸಿ, ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವ ಸದುದ್ದೇಶದಿಂದಾಗಿ ಪಿಯುಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ 2ನೇ ಬಾರಿಗೆ ಪರೀಕ್ಷೆ (ಸಪ್ಲಿಮೆಂಟರಿ)ಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ 95 ಸಾವಿರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ಈ ತಿಂಗಳಾಂತ್ಯದಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಮೊದಲ ಸಪ್ಲಿಮೆಂಟರಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮೊದಲ ಯತ್ನದಲ್ಲಿ ವಿಫಲವಾದವರು ಸುಮ್ಮನೆ ಒಂದು ವರ್ಷ ಮನೆಯಲ್ಲಿ ಕೂರುವುದನ್ನು ತಪ್ಪಿಸಲು ವಿಭಿನ್ನ ಪ್ರಯತ್ನ ಮಾಡಲಾಗಿದೆ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಶಿಕ್ಷಣ ಇಲಾಖೆಯಲ್ಲಿರುವ ಸಮಸ್ಯೆಗಳು ಬೇರೆಲ್ಲೂ ಇಲ್ಲ. 1.20 ಕೋಟಿ ಮಕ್ಕಳು ಇಲಾಖೆಯಲ್ಲಿದ್ದಾರೆ. ಶಿಕ್ಷಣ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಶಿಕ್ಷಣ ಇಲಾಖೆ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಉದ್ದೇಶ ಹೊಂದಿದ್ದೇನೆ. ಶಾಲೆಗಳ ಆರಂಭದ ದಿನಗಳಲ್ಲಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ಅಡಚಣೆಯಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಳೆದ ಮೂರೇ ತಿಂಗಳಲ್ಲಿ 30 ಸಾವಿರ ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ. 13,500 ಶಿಕ್ಷಕರು ಮತ್ತು 10 ಸಾವಿರ ಅತಿಥಿ ಶಿಕ್ಷಕರ ನೇಮಕವಾದರೆ ಇಲಾಖೆ ಮೇಲೆ ಒತ್ತಡ ಕಡಿಮೆ ಆಗಲಿದೆ ಎಂದು ಹೇಳಿದರು. ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಜಿಪಂ ಸಿಇಒ ಸ್ನೇಹಲ್ ಲೋಖಂಡೆ ಹಾಗೂ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಉಪಸ್ಥಿತರಿದ್ದರು.