

ಬೆಟ್ಟದಪುರ: ಕಲಿಕೆಯಲ್ಲಿ ವಿದ್ಯಾರ್ಥಿಗಳು ಆಸಕ್ತಿ ಹೊಂದಿದ್ದರೆ, ಅವರು ಶೈಕ್ಷಣಿಕ ಮತ್ತು ವೈಯಕ್ತಿಕವಾಗಿ ಉತ್ತಮ ಫಲಿತಾಂಶ ಪಡೆಯುತ್ತಾರೆ ಎಂದು ಸಾಮಾಜಿಕ ಲೆಕ್ಕಪರಿಶೋಧನಾಧಿಕಾರಿ ಯೋಗೇಶ್ ತಿಳಿಸಿದರು.
ಬೆಟ್ಟದಪುರ ಸಮೀಪದ ಹಲಗನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಇತ್ತಿಚೇಗೆ ಆಯೋಜಿಸಿದ್ದ ಸಾಮಾಜಿಕ ಲೆಕ್ಕ ಪರಿಶೋಧನೆ ಹಾಗೂ ಶಾಲಾ ಪಾಲಕರ ಸಭೆಯಲ್ಲಿ ಮಾತನಾಡಿ, ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಕೇವಲ ಮಾಹಿತಿ ಪಡೆಯುವ ಬದಲು ಅದನ್ನು ಆನಂದಿಸುವ ಮತ್ತು ಆಸಕ್ತಿಯಿಂದ ಕಲಿಯುವಂತೆ ಮಾಡುವುದು ಶಿಕ್ಷಕರ ಜವಾಬ್ದಾರಿ. ಇದು ಅವರ ಭವಿಷ್ಯಕ್ಕೆ ಉತ್ತಮ ಬುನಾದಿಯಾಗಲಿದೆ ಎಂದು ಹೇಳಿದರು.
ಮುಖ್ಯಶಿಕ್ಷಕ ಮಹದೇವಪ್ಪ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಆಸಕ್ತಿಗಳಿಗೆ ಅನುಗುಣವಾಗಿ ಪ್ರೋತ್ಸಾಹ ನೀಡಿದರೆ, ಅವರು ತಮ್ಮನ್ನು ತಾವು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಹೆಚ್ಚು ಆತ್ಮವಿಶ್ವಾಸದಿಂದ ಬೆಳೆಯುತ್ತಾರೆ. ಇದು ಕೇವಲ ಶಾಲಾ ಶಿಕ್ಷಣಕ್ಕೆ ಸೀಮಿತವಾಗದೆ, ಅವರ ಇಡೀ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದರು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜಶೇಖರಯ್ಯ, ಉಪಾಧ್ಯಕ್ಷ ಗುಲ್ನಾಸ್ ಬಾನು, ಸದಸ್ಯರಾದ ಕಾಳೇಗೌಡ, ಲೆಕ್ಕಪರಿಶೋಧನಾಧಿಕಾರಿ ಸುಕನ್ಯಾ, ಶಿಕ್ಷಕರಾದ ರವಿ, ಆಶಾಮಣಿ, ಆಶಾ ಕೆ.ಎನ್ ಸೇರಿದಂತೆ ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.