ಭದ್ರಾಗಿರಿಯಲ್ಲಿ ಆಡಿ ಕೃತಿಕ ಸಂಭ್ರಮ

29 TKE 1A(1)
Published on

ತರೀಕೆರೆ: ತಾಲೂಕಿನ ಎಂ.ಸಿ.ಹಳ್ಳಿ ಗ್ರಾಮದ ಭದ್ರಗಿರಿ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಸೋಮವಾರ ಆಡಿ ಕೃತಿಕ ಕಾವಡಿ ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಭಾನುವಾರ ತಡರಾತ್ರಿ ದೇಗುಲದಲ್ಲಿ ಪ್ರಧಾನ ಅರ್ಚಕ ಶ್ರೀ ಮರುಗೇಶ್ ಸ್ವಾಮಿ ನೇತೃತ್ವದಲ್ಲಿ ವಳ್ಳಿ ದೇವಯಾನಿ ಸಮೇತ ವಿರಾಜಮಾನವಾಗಿರುವ ಶ್ರೀ ಶಿವ ಸುಬ್ರಹ್ಮಣ್ಯ ಸ್ವಾಮಿಗೆ ಹಾಲು, ತುಪ್ಪ, ಮೊಸರು, ಎಳೆನೀರು, ಜೇನುತುಪ್ಪ ಸೇರಿ ಸುಗಂಧ ದ್ರವ್ಯಗಳಿಂದ ಅಭಿಷೇಕ ಮಾಡಿ ವಿವಿಧ ಹೂವುಗಳಿಂದ ಅಲಂಕಾರಗೊಳಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಧುರೈ, ಕೊಯಮುತ್ತೂರು, ಸೇಲಂ, ಕುಮಾರಪಾಳ್ಯಂ, ವೇಲೂರು, ಕಡೂರು, ಬೀರೂರು, ಭದ್ರಾವತಿ, ಸಾಗರ, ಕಾರೇಹಳ್ಳಿ, ಬಾರಂದೂರು, ತೀರ್ಥಹಳ್ಳಿ ಮಾತ್ರವಲ್ಲದೇ, ತಾಲೂಕಿನ ಕೃಷ್ಣಾಪುರ, ಬಳ್ಳಾವರ, ಶಾಂತಿಪುರ, ಲಕ್ಕವಳ್ಳಿ, ಎಂ.ಸಿ.ಹಳ್ಳಿಯಿಂದ ಆಗಮಿಸಿದ ಸಹಸ್ರಾರು ಭಕ್ತರು ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು.
ಚಿಕ್ಕಮಗಳೂರು, ಕೃಷ್ಣಾಪುರ, ಶಾಂತಿನಗರ, ಲಕ್ಕವಳ್ಳಿ, ದುಗ್ಲಾಪುರ, ಭದ್ರಾವತಿ, ತರೀಕೆರೆ ಮತ್ತಿತರ ಕಡೆಯಿಂದ ಪುಷ್ಪಾ, ನವಿಲು, ಶೂಲ ಕಾವಡಿ ಹೊತ್ತು ಬಂದ ನೂರಾರು ಭಕ್ತರು ದೇವರಿಗೆ ಕಾವಡಿ ಸಮರ್ಪಿಸಿ ಹರಕೆ ತೀರಿಸಿದರು. ಮಧ್ಯಾಹ್ನ 1ಕ್ಕೆ ನಿವೇದನಾ, ಮಹಾ ಮಂಗಳಾರತಿ ನೆರವೇರಿಸಿ ಬಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಯಿತು.
ದೇಗುಲ ಆಡಳಿತ ಮಂಡಳಿ ಅಧ್ಯಕ್ಷ ಎ.ಚಂದ್ರಘೋಷನ್ ಸೇರಿ ಭದ್ರಗಿರಿ ಸೇವಾ ಟ್ರಸ್ಟ್ ಪದಾಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net