

ಬೇತಮಂಗಲ: ಬೇತಮಂಗಲ ಗ್ರಾಪಂ ವ್ಯಾಪ್ತಿಯ ವಾರದ ಸಂತೆ, ಬೀದಿಬದಿ ವ್ಯಾಪಾರ ನಡೆಸಲು ಹಣ ವಸೂಲಿ ಮತ್ತು 27 ಮಂದಿ ಸದಸ್ಯರು ಪ್ರತಿನಿಧಿಸುವ ಎಲ್ಲ ವಾರ್ಡ್ಗಳಲ್ಲಿರುವ ಕೊಳವೆ ಬಾವಿ ದುರಸ್ತಿ ಮತ್ತು ತುರ್ತು ಸಂದರ್ಭದಲ್ಲಿ ನೀರು ಪೂರೈಕೆ ಮಾಡಲು ಗುತ್ತಿಗೆ ಪಡೆಯುವುದಕ್ಕೆ ಸಂಬಂಧಪಟ್ಟಂತೆ ಶುಕ್ರವಾರ ಪಂಚಾಯಿತಿ ಆವರಣದಲ್ಲಿ ಹರಾಜು ಪ್ರಕ್ರಿಯೆ ಹಮ್ಮಿಕೊಳ್ಳಲಾಗಿತ್ತು.
ವಾರದ ಸಂತೆ 5.65 ಲಕ್ಷ ರೂ.ಗೆ ಹರಾಜಾಗಿ ಪಂಚಾಯಿತಿಗೆ ಲಾಭ ತಂದುಕೊಟ್ಟಿತು, ಬೀದಿಬದಿ ವ್ಯಾಪಾರಗಳ ಸುಂಕ ವಸೂಲಿ ಹರಾಜಿನಲ್ಲಿ ರವಿ ಎಂಬುವವರು 5 ಲಕ್ಷ 60 ಸಾವಿರಕ್ಕೆ ಗುತ್ತಿಗೆಗೆ ಪಡೆದರು. ಕೊಳವೆ ಬಾವಿಗಳ ರಿಪೇರಿ ಸೇರಿ ಒಂದು ವರ್ಷದ ಕಾಲ ಸಂಪೂರ್ಣ ಉಸ್ತುವಾರಿಯನ್ನು ಮಂಜುನಾಥ ಎಂಬುವವರು 9 ಲಕ್ಷಕ್ಕೆ ಗುತ್ತಿಗೆಗೆ ಪಡೆದಿದ್ದು, ಈ ಹಣವನ್ನು ಪಂಚಾಯಿತಿ ಭರಿಸಬೇಕಾಗುತ್ತದೆ. ಇದರಿಂದಾಗಿ ಒಂದು ಕಡೆ ಲಾಭ, ಮತ್ತೊಂದು ಕಡೆ ನಷ್ಟ ಎನ್ನುವಂತಾಯಿತು.
ಪಿಡಿಒ ಮಂಜುನಾಥ್ ಮಾತನಾಡಿ, ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಗುತ್ತಿಗೆ ಪಡೆದವರು ಪಂಚಾಯಿತಿ ರೂಪಿಸಿರುವ ನಿಯಮಗಳನ್ನು ಪಾಲಿಸಬೇಕು. ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಬರದಂತೆ ನೋಡಿಕೊಳ್ಳಬೇಕು. ವಾರ್ಡ್ ಸದಸ್ಯರು ಮತ್ತು ಸಾರ್ವಜನಿಕರಿಂದ ಯಾವುದಾದರೂ ದೂರು ಬಂದರೆ ಹಣ ಪಾವತಿ ನಿಲ್ಲಿಸುವುದು ಸೇರಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.
ಪಂಚಾಯಿತಿ ವ್ಯಾಪ್ತಿಯ ಎಲ್ಲ 9 ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಈಗಾಗಲೆ ಎಲ್ಲ ವ್ಯವಸ್ಥೆ ಪ್ರಾರಂಭ ಆಗಿದೆ. ಮೂಲ ಸೌಲಭ್ಯಗಳನ್ನು ತಲುಪಿಸಲು ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ.
- ವಿನು ಕಾರ್ತಿಕ್
ಬೇತಮಂಗಲ ಗ್ರಾಪಂ ಅಧ್ಯಕ್ಷ