ಹರಾಜು ಪ್ರಕ್ರಿಯೆ ಒಳ್ಳೆಯದಲ್ಲ: ಕಾರ್ಯಕರ್ತರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ

12-cpt-1p hdk
Published on

ಚನ್ನಪಟ್ಟಣ: ದೇವಸ್ಥಾನ, ಸ್ಮಶಾನ ಹಾಗೂ ಗ್ರಾಮ ಅಭಿವೃದ್ಧಿಯಲ್ಲಿ ಗ್ರಾಪಂ ಸದಸ್ಯ ಸ್ಥಾನಗಳನ್ನು ಹರಾಜು ನಡೆಸುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಚನ್ನಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಲಕ್ಷಾಂತರ ಹಣ ನೀಡಿ ಸದಸ್ಯ ಸ್ಥಾನ ಕೊಂಡುಕೊಂಡರೆ, ಅವರ ಕೈಯಿಂದ ಅಭಿವೃದ್ಧಿ ಸಾಧ್ಯವಿಲ್ಲ. ಹಣ ಬಂಡವಾಳ ಹೂಡಿದವರು ಹಣ ಮಾಡುವ ಕೆಲಸ ಮಾಡುತ್ತಾರೆಯೇ ವಿನಃ ಅಭಿವೃದ್ಧಿ ಸಾಧ್ಯವಿಲ್ಲ. ಹೀಗಾಗಿ ಹರಾಜು ಪ್ರಕ್ರಿಯೆಗಿಂತ ಚುನಾವಣೆ ಎದುರಿಸಿ ಹೆಚ್ಚಿನ ಸ್ಥಾನವನ್ನು ಗೆಲ್ಲಿ ಎಂದು ಕರೆ ನೀಡಿದರು.

ಗ್ರಾಪಂ ಚುನಾವಣೆ ಪಕ್ಷದ ಸಂಘಟನೆಗೆ ಭದ್ರ ಬುನಾದಿಯಾಗಲಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಗ್ರಾಪಂಗಳನ್ನು ವಶಪಡಿಸಿಕೊಳ್ಳಲು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶ್ರಮಿಸಬೇಕು. ಗ್ರಾಪಂಗಳು ನಮ್ಮ ಹಿಡಿತದಲ್ಲಿದ್ದರೆ, ಸಾಕಷ್ಟು ಅಭಿವೃದ್ಧಿ ಸಾಧ್ಯ. ಕ್ಷೇತ್ರದ ಅಭಿವೃದ್ಧಿ ಮಾಡಲು ಸರ್ಕಾರದಿಂದ ನಾನು ತರುವ ಹಣ ಸದುಪಯೋಗವಾಗಬೇಕಾದರೆ, ಗ್ರಾಪಂಗಳ ಅಧಿಕಾರವನ್ನು ಪಕ್ಷದ ಕಾರ್ಯಕರ್ತರು ಹಿಡಿಯಬೇಕು ಎಂದರು.

ರಾಜ್ಯದಲ್ಲಿ ಜೆಡಿಎಸ್ ಬೇರು ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ. ದೇವೇಗೌಡರ ಶಕ್ತಿ ಎಂದಿಗೂ ಕಮ್ಮಿಯಾಗುವುದಿಲ್ಲ. ಪಕ್ಷದ ಕಾರ್ಯಕರ್ತರು ಹೆದರುವ ಅವಶ್ಯಕತೆ ಇಲ್ಲ. ನಿಮ್ಮ ಬೆನ್ನ ಹಿಂದೆ ದೇವೇಗೌಡರ ಕುಟುಂಬವಿದೆ. ಯಾವುದೇ ಅಂಜಿಕೆ ಇಲ್ಲದೆ ಚುನಾವಣೆ ಎದುರಿಸಿ. ಬೇರೆಯವರು ಏನಾದರೂ ಭಾಷಣ ಮಾಡಲಿ. ಕುಮಾರಸ್ವಾಮಿ ಶಕ್ತಿ ಇನ್ನು ವಿಧಾನಸೌಧದಲ್ಲಿದೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು. ತಾಲೂಕಿನಲ್ಲಿ ಕಾರ್ಯಕರ್ತರ ಯಾವುದೇ ಸಮಸ್ಯೆಯಿಲ್ಲ. ನಾಯಕರ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿವೆ. ಅವುಗಳನ್ನು ನಾನು ಸರಿಪಡಿಸುವೆ. ಪಕ್ಷದ ಮುಖಂಡರು ಒಗ್ಗೂಡಿದರೆ ತಾಲೂಕಿನ ಎಲ್ಲ ಗ್ರಾಪಂಗಳನ್ನು ವಶಕ್ಕೆ ಪಡೆಯಬಹುದು. ಈ ನಿಟ್ಟಿನಲ್ಲಿ ಎಲ್ಲರೂ ಒಂದಾಗಬೇಕು ಎಂದು ಕರೆನೀಡಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು, ಪಕ್ಷದ ಹಿರಿಯ ಮುಖಂಡರಾದ ಹಾಪ್​ಕಾಮ್್ಸ ದೇವರಾಜು, ಸಿಂ.ಲಿಂ.ನಾಗರಾಜು, ನಗರ ಅಧ್ಯಕ್ಷ ರಾಂಪುರ ರಾಜಣ್ಣ, ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಲಿಂಗೇಶ್​ಕುಮಾರ್, ಪಿಎಲ್​ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದನಹಳ್ಳಿ ನಾಗರಾಜು ಪಕ್ಷದ ಮುಖಂಡರಾದ ನಿಜಲಿಂಗೇಗೌಡ, ಕುಕ್ಕುರುದೊಡ್ಡಿ ಜಯರಾಂ, ನಾಗವಾರ ರಂಗಸ್ವಾಮಿ, ಅರಳಾಳುಸಂದ್ರ ಶಿವಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಲ್ಚರ್ ಇಲ್ಲದವರ ಬಗ್ಗೆ ನಾನೇಕೆ ರ್ಚಚಿಸಲಿ...

ಕಲ್ಚರ್ ಇಲ್ಲದ ಜನರ ಬಗ್ಗೆ ನಾನೇಕೆ ಚರ್ಚೆ ಮಾಡಲಿ.., ಅವರ ಹಿನ್ನೆಲೆ ಏನು..? ಎಷ್ಟು ಜನರಿಗೆ ಟೋಪಿ ಹಾಕಿ ಬಂದಿದ್ದಾರೆ ಎಲ್ಲವೂ ನನಗೆ ತಿಳಿದಿದೆ ಎನ್ನುತ್ತಲೇ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ದೊಡ್ಡಮಳೂರಿನಲ್ಲಿ್ಲ ಆಯೋಜಿಸಿದ್ದ ಕಾರ್ಯಕರ್ತರ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ತನ್ನ ವಿರುದ್ಧ ಮಾತನಾಡಿದ ಯೋಗೇಶ್ವರ್ ವಿರುದ್ಧ ಏಕವಚನದಲ್ಲಿ ಪ್ರತಿದಾಳಿ ನಡೆಸಿದರು.

ಯೋಗೇಶ್ವರ್ ರಾಜಕೀಯಕ್ಕೆ ಬರುವ ಮೊದಲೇ ನನಗೆ ತಾಲೂಕಿನ ಪರಿಚಯವಿತ್ತು. ವಿಠಲೇನಹಳ್ಳಿ ಗೋಲಿಬಾರ್ ಆದಾಗ ಅವನು ಎಲ್ಲಿದ್ದ? ಚನ್ನಪಟ್ಟಣದ ಹಳ್ಳಿಗಳ ಹೆಸರುನಾನು ಹೇಳಬೇಕಾ? ಇದು ಅವನ ದುರಂಹಾರಕಾರದ ಮಾತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಮಹದೇಶ್ವರ ದೇವಸ್ಥಾನದ ವಿಚಾರದಲ್ಲೂ ಲೂಟಿ ಮಾಡಿರುವ ಈತ ತಾಲೂಕನ್ನು ಅಭಿವೃದ್ಧಿ ಮಾಡುತ್ತಾರಾ? ಕೆರೆ ತುಂಬಿಸುವ ಯೋಜನೆಯಲ್ಲೂ ಕಳಪೆ ಪೈಪ್​ಲೈನ್ ಮಾಡಿ ದುಡ್ಡು ತಿದ್ದಿದ್ದಾನೆ. ಆತ ಗುದ್ದಲಿಪೂಜೆ ಮಾಡುವುದಕ್ಕೂ ಕಮಿಷನ್ ತೆಗೆದುಕೊಳ್ಳುವವನು, ನಾನು ಆ ಕೆಲಸ ಮಾಡಿದವನಲ್ಲ ಎಂದರು.

ನನ್ನ ಸರ್ಕಾರ ತೆಗೆಯಲು ಈತನ ಯಾವ ಪಾತ್ರವಿಲ್ಲ. ಸುಮ್ಮನೆ ಅದನ್ನು ತನ್ನದು ಎಂದು ಬಿಂಬಿಸಿಕೊಳ್ಳುತ್ತಿದ್ದಾನೆ. ಇವನೇನು ಮಹಾನ್ ನಾಯಕನಾ? ಇವನು ಕೈಯಿಂದ ಹಣ ಖರ್ಚು ಮಾಡುತ್ತಾನಾ.., ಯಾರಿಗೋ ಟೋಪಿ ಹಾಕಿ ಬಂದವನು... ಎಂದು ಟೀಕಾಪ್ರಹಾರ ನಡೆಸಿದರು.

ನನ್ನ ಸರ್ಕಾರ ತೆಗೆಯಲು ಈತನ ಪಾತ್ರವಿಲ್ಲ. ಅವನ್ಯಾರೋ ರಮೇಶ್ ಜಾರಕಿಹೊಳಿ ಸರ್ಕಾರ ಬೀಳಿಸಲು ಕೈ ಹಾಕಿದ್ದ. ಅವನ ಹಿಂದೆ ಹೋಗಿ ಗೇಟ್ ಕೀಪರ್ ಕೆಲಸವನ್ನು ಈತ ಮಾಡಿದ್ದ. ಇವನ ಹಿಂದೆ ಯಾವ ಎಂಎಲ್​ಎಯೂ ಬಂದಿಲ್ಲ ಎಂದರು.

ನಾನು ಬಡವರ ಗುಡಿಸಲಿನಲ್ಲೂ ಮಲಗಿದ್ದೇನೆ, ಅರಮನೆಯನ್ನು ನೋಡಿದ್ದೇನೆ. ರಷ್ಯಾದ ಪ್ಯಾಲೇಸ್​ನಲ್ಲೂ ಮಲಗಿದ್ದೇನೆ. ನಾನೇನು 24 ಗಂಟೆ ಹೋಟೆಲ್​ನಲ್ಲಿ ಅಧಿಕಾರ ನಡೆಸಿರಲಿಲ್ಲ. ಬಡವರ ಪರವಾಗಿ ಅಧಿಕಾರ ನಡೆಸಿದ್ದೇನೆ. ಈತನಿಂದ ಅಧಿಕಾರ ನಡೆಸುವುದನ್ನು ಕಲಿಯಬೇಕಾಗಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.

ರಾಜ್ಯ ಸರ್ಕಾರ ಅವನದಲ್ಲ, ನನ್ನ ಕ್ಷೇತ್ರವನ್ನು ಆತ ಹೇಗೆ ಕಂಟ್ರೋಲ್ ತೆಗೆದುಕೊಳ್ಳುತ್ತಾನೆ, ನಾನು ಇಲ್ಲಿನ ಶಾಸಕ. ನನ್ನ ಕಂಟ್ರೋಲ್​ನಲ್ಲಿ ಕ್ಷೇತ್ರವಿರುತ್ತದೆ. ಬೇರೆಯವರ ಹತ್ತಿರ ಈತನ ಆಟ ನಡೆಯಬಹುದು. ಆದರೆ, ನನ್ನಹತ್ತಿರ ನಡೆಯುವುದಿಲ್ಲ. ಈ ಮನುಷ್ಯ ಸಿನಿಮಾ ಕೋಟದಲ್ಲಿ ಎಂಎಲ್​ಸಿ ಆಗಿದ್ದಾನೆ. ಸಿನಿಮಾದವರ ಕಷ್ಟಸುಖ ನೋಡಿಕೊಳ್ಳಲಿ. ನನ್ನ ಕ್ಷೇತ್ರವನ್ನು ನೋಡಿಕೊಳ್ಳುವುದು ನನಗೆ ತಿಳಿದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net