ಬಿದ್ದ ಸ್ಥಳದಲ್ಲೇ ಮರ, ಟೊಂಗೆಗಳ ಹರಾಜು

fallen trees
Published on

ಬೆಂಗಳೂರು: ನಗರದಲ್ಲಿ ಭಾರೀ ಮಳೆ ಹಾಗೂ ಗಾಳಿಯಿಂದ ಧರೆಗುರುಳಿರುವ ಮರ, ಟೊಂಗೆಗಳು ಸಾರ್ವಜನಿಕರ ಓಡಾಟ ಹಾಗೂ ಸಂಚಾರಕ್ಕೆ ಅಡ್ಡಿಯಾಗದಿರಲು ಅವುಗಳ ತ್ವರಿತ ವಿಲೇವಾರಿಗೆ ಬಿದ್ದ ಸ್ಥಳದಲ್ಲೇ ಬಹಿರಂಗ ಹರಾಜು ಮಾಡಲು ಬಿಬಿಎಂಪಿ ಮುಂದಾಗಿದೆ.

ಕಳೆದ ಹತ್ತು ದಿನಗಳಿಂದೀಚಿಗೆ ಭಾರೀ ವರ್ಷಧಾರೆಯೊಂದಿಗೆ ಬಿರುಗಾಳಿಯೂ ಬೀಸಿದ ಕಾರಣ ಹೆಚ್ಚಿನ ಮರಗಳು ಬಿದ್ದಿವೆ. ಇವುಗಳನ್ನು ತಕ್ಷಣವೇ ಸಾಗಿಸಲು ಪಾಲಿಕೆಗೆ ಸಾಧ್ಯವಾಗಿಲ್ಲ. ಮರ ಬಿದ್ದ ಸ್ಥಳದಲ್ಲೇ ಅವುಗಳನ್ನು ತುಂಡು ಮಾಡಿ ರಸ್ತೆಬದಿ ಹಾಕಲಾಗಿದೆ. ಸ್ವಲ್ಪಮಟ್ಟಿನ ಟೊಂಗೆಗಳನ್ನು ಮಾತ್ರ ಅರಣ್ಯ ವಿಭಾಗದ ಡಿಪೋಗಳಿಗೆ ಸಾಗಿಸಲಾಗಿದೆ. ಉಳಿದಿರುವ ಮರದ ಅವಶೇಷಗಳನ್ನು ಹೊರಸಾಗಿಸಲು ಕಷ್ಟವಾಗುತ್ತಿರುವುದರಿಂದ ಸ್ಥಳದಲ್ಲೇ ಸಾರ್ವಜನಿಕವಾಗಿ ಹರಾಜು ಹಾಕಿ ವಿಲೇವಾರಿ ಮಾಡುವ ಉಪಾಯದ ದಾರಿಯನ್ನು ಪಾಲಿಕೆ ಕಂಡುಕೊಂಡಿದೆ.

ಈವರೆಗೆ 325 ಮರಗಳು ಹಾಗೂ 698 ಟೊಂಗೆಗಳು ಧರೆಗುರುಳಿವೆ. ಇವುಗಳಲ್ಲಿ ರಸ್ತೆಗೆ ಅಡ್ಡವಾಗಿ ಬಿದ್ದಿರುವುದನ್ನು ತೆರವುಗೊಳಿಸಲಾಗಿದೆ. ಕೆಲವೆಡೆ ರಸ್ತೆಬದಿ ಇರಿಸಲಾಗಿದೆ. ಪಾಲಿಕೆ ವ್ಯಾಪ್ತಿಯ ಎಲ್ಲ ಎಂಟೂ ವಲಯಗಳಲ್ಲಿ ಡಿಪೋಗಳಿದ್ದರೂ, ಅಲ್ಲಿಗೆ ಸಾಗಿಸಲು ವಾಹನ ಹಾಗೂ ಸಿಬ್ಬಂದಿಗಳ ಕೊರತೆ ಎದುರಾಗಿದೆ. ಮುಖ್ಯವಾಗಿ ಮರ ಸಾಗಣೆ ತಂಡದಲ್ಲಿರುವ ವಾಹನವು ದಿನಕ್ಕೆ ಎರಡು ಬಾರಿ ಮಾತ್ರ ದಿಮ್ಮೆಗಳನ್ನು ಸಾಗಿಸಬಹುದಾಗಿದೆ. ಹೆಚ್ಚುವರಿ ಟ್ರಿಪ್‌ಗೆ ಪೊಲೀಸರ ಸಹಕಾರ ಸಿಗುತ್ತಿಲ್ಲ. ಈ ಸಮಸ್ಯೆಯಿಂದ ಹೊರಬರಲು ಸ್ಥಳದಲ್ಲೇ ಹರಾಜು ಹಾಕುವ ಪ್ರಕ್ರಿಯೆಗೆ ಮೊರೆ ಹೋಗಲಾಗಿದೆ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಟನ್‌ಗೆ 850 ರೂ. ನಿಗದಿ:

ಪ್ರಸ್ತುತ ಪಾಲಿಕೆಯು ಬಿದ್ದ ಮರಗಳ ಅವಶೇಷ ಸಾಗಿಸಲು ಆನ್‌ಲೈನ್ ಮೂಲಕ ಸಾಗಿಸುವ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಈಗ ಸ್ಥಳದಲ್ಲೇ ಹರಾಜು ಹಾಕಲು ಮುಖ್ಯ ಆಯುಕ್ತರು ಒಪ್ಪಿಗೆ ನೀಡಿರುವುದರಿಂದ 2-3 ದಿನಗಳಲ್ಲಿ ಹರಾಜು ಆರಂಭಿಸಲಾಗುತ್ತದೆ. ಪ್ರತಿ ಟನ್‌ಗೆ ಕನಿಷ್ಠ 850 ರೂ. ನಿಗದಿ ಮಾಡಿದ್ದು, ಹೆಚ್ಚುವರಿ ಮೊತ್ತ ಸೇರಿ ಹರಾಜು ಕೂಗಲು ಅವಕಾಶ ಮಾಡಿಕೊಡಲಾಗುವುದು. ಯಶಸ್ವಿ ಬಿಡ್‌ದಾರರು ಮರಗಳ ಅವಶೇಷವನ್ನು 3 ದಿನದೊಳಗೆ ಕೊಂಡೊಯ್ಯಲು ಕಾಲಾವಕಾಶ ನೀಡಲಾಗುವುದು. ಹರಾಜಿಗೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳನ್ನು ರಚಿಸಲಾಗುತ್ತಿದ್ದು, ಶೀಘ್ರವೇ ಅಂತಿಮಗೊಳಿಸಲಾಗುವುದು. ಪಾರದರ್ಶಕ ವ್ಯವಸ್ಥೆಗಾಗಿ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net