ಬಿಬಿಎಂಪಿಯಿಂದ ಆಸ್ತಿತೆರಿಗೆ ಬಾಕಿ ವಸೂಲಿಗೆ ಸ್ಥಿರಾಸ್ತಿಗಳ ಹರಾಜು

bbmp office
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸದೆ ದೀರ್ಘಕಾಲದಿಂದ ಬಾಕಿ ಉಳಿಸಿಕೊಂಡಿರುವ ಸ್ವತ್ತುದಾರರ ಸ್ಥಿರಾಸ್ತಿಯನ್ನು ಹರಾಜು ಮಾಡುವ ಪ್ರಕ್ರಿಯೆಯನ್ನು ಪಾಲಿಕೆ ಆರಂಭಿಸಿದೆ. ಈ ಸಂಬಂಧ ಕಂದಾಯ ವಿಭಾಗದ ಮುಖ್ಯಸ್ಥರು ಎಲ್ಲ ವಲಯಗಳಿಗೆ ಸುಸ್ತಿದಾರರ ಪಟ್ಟಿ ರವಾನಿಸಿದ್ದು, ಶೀಘ್ರವೇ ಸ್ಥಿರಾಸ್ತಿ ಹರಾಜು ಮಾಡಿ ಬಂದಂತಹ ಹಣವನ್ನು ಬೊಕ್ಕಸಕ್ಕೆ ಜಮೆ ಮಾಡುವಂತೆ ಸೂಚಿಸಿದ್ದಾರೆ.

ಈಗಾಗಲೇ ಬೃಹತ್ ಮೊತ್ತವನ್ನು ಉಳಿಸಿಕೊಂಡಿರುವವರಿಗೆ 2-3 ಬಾರಿ ನೋಟಿಸ್ ನೀಡಲಾಗಿದೆ. ಒಟಿಎಸ್ ಗಡುವು ಮುಗಿದಿರುವುದರಿಂದ ಈ ಹಂತದಲ್ಲಿ ಬಾಕಿ ಉಳಿಸಿಕೊಂಡಿದ್ದಲ್ಲಿ ಅಂತಹ ಸ್ವತ್ತುಗಳನ್ನು ಹರಾಜು ಹಾಕಲು ಬಿಬಿಎಂಪಿ ಕಾಯ್ದೆ 2020 ರ ಸೆಕ್ಷನ್ 156 ಉಪಪ್ರಕರಣ 5ರಂತೆ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಹಾಗಾಗಿ ಕೊನೆಯ ಯತ್ನವಾಗಿ ಆಸ್ತಿ ತೆರಿಗೆ ಬಾಕಿ ವಸೂಲಿಗಾಗಿ ಇಂತಹ ಆಸ್ತಿಗಳನ್ನು ಹರಾಜಿಗೆ ಇಡಲಾಗುತ್ತಿದೆ ಎಂದು ಪಾಲಿಕೆಯ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.

ಫೆ.6ಕ್ಕೆ ಹರಾಜು ದಿನ ನಿಗದಿ:

ಪಾಲಿಕೆಯ ಎಲ್ಲ ಎಂಟೂ ವಲಯಗಳಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಸ್ವತ್ತುದಾರರ ಪಟ್ಟಿ ಸಿದ್ಧವಾಗಿದೆ. ಇದರನ್ವಯ ಆಯಾ ವಲಯಗಳಲ್ಲಿ ತಲಾ 10 ಸ್ವತ್ತುಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಅತ್ಯಧಿಕ ಬಾಕಿ ಉಳಿಸಿಕೊಂಡಿರುವ 1-2 ಸ್ವತ್ತುಗಳನ್ನು ಹರಾಜು ಹಾಕಲು ನಿಯಮದಂತೆ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಹರಾಜಿನಲ್ಲಿ ಭಾಗವಹಿಸುವವರು ಹಾಗೂ ಅಧಿಕಾರಿಗಳಿಗೆ ಕೆಲ ನಿಯಮಗಳನ್ನೂ ರೂಪಿಸಲಾಗಿದೆ. ದಾಸರಹಳ್ಳಿ ವಲಯದಲ್ಲಿ ಫೆ.6ರಂದು ಹರಾಜಿಗೆ ದಿನ ನಿಗದಿಯಾಗಿದೆ. ಇಲ್ಲಿನ 39ನೇ ವಾರ್ಡ್‌ನ (ಚೊಕ್ಕಸಂದ್ರ) ಎಂ.ರಂಗಪ್ಪ ಎಂಬುವವರಿಗೆ ಸೇರಿದ 9,090 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಿರುವ 44,933 ಚ. ಅಡಿ ಉಳ್ಳ ಕಟ್ಟಡಕ್ಕೆ 2.10 ಕೋಟಿ ರೂ. ತೆರಿಗೆ ಉಳಿಸಿಕೊಳ್ಳಲಾಗಿದೆ. ಇತ್ತೀಚಿಗೆ 25 ಲಕ್ಷ ರೂ. ಪಾವತಿಸಿದ್ದು, ಬಾಕಿ ವಸೂಲಾಗಬೇಕಿರುವ 1.85 ಕೋಟಿ ರೂ. ಅನ್ನು ಹರಾಜು ಮೂಲಕ ಪಡೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ರೀತಿ ಇತರ ವಲಯಗಳಲ್ಲೂ ಹಲವು ಸ್ವತ್ತುಗಳನ್ನು ಹರಾಜು ಹಾಕಲಾಗುತ್ತಿದೆ.

ಹರಾಜು ಮಾಡಲಾಗುವ ಸ್ವತ್ತಿಗೆ ಸ್ಥಳೀಯ ಮಾರ್ಗಸೂಚಿ ದರ ಅನ್ವಯ ಮೌಲ್ಯ ನಿಗದಿ ಮಾಡಲಾಗುತ್ತದೆ. ನಿಗದಿತ ಮೊತ್ತ ದಾಟಿದ್ದಲ್ಲಿ ಆ ಸ್ವತ್ತನ್ನು ಹರಾಜು ಕೂಗಿದವನಿಗೆ ಮಾರಾಟ ಮಾಡಲಾಗುತ್ತದೆ. ಹರಾಜು ದಿನವೇ ಸ್ವತ್ತಿನ ಮೌಲ್ಯದ ಶೇ.1 ಹಣವನ್ನು ಜಮೆ ಮಾಡಿ ಮುಂದಿನ 3 ದಿನದಲ್ಲಿ ಶೇ.25 ಮೊತ್ತವನ್ನು ಪಾವತಿಸಬೇಕು. ಆನಂತರ 15 ದಿನದಲ್ಲಿ ಬಾಕಿ ಹಣ ಪಾವತಿಸಬೇಕಿದೆ (50 ಲಕ್ಷ ರೂ. ಮೀರಿದ್ದಲ್ಲಿ 30 ದಿನ ಕಾಲಾವಕಾಶ). ಒಂದು ವೇಳೆ ಗಡುವಿನೊಳಗೆ ಹಣ ಸಂದಾಯ ಮಾಡದಿದ್ದಲ್ಲಿ ಕಂತಿನಲ್ಲಿ ಪಾವತಿಸಿದ್ದ ಹಣವನ್ನೂ ಪಾಲಿಕೆಗೆ ಜಮೆ ಮಾಡಿಕೊಳ್ಳಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net