ಮೂಲೆ ನಿವೇಶನಗಳ ಹರಾಜಿನಿಂದ ಮುಡಾ ದಿವಾಳಿಯಾಗಲಿದೆ: ಸಿ.ಎನ್. ಮಂಜೇಗೌಡ

Manjegowda C.N
Published on

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಇತ್ತೀಚೆಗೆ ಯಾವುದೇ ಹೊಸ ಬಡಾವಣೆ ನಿರ್ಮಿಸುತ್ತಿಲ್ಲ. ಆದರೂ ನಗರದಲ್ಲಿನ ತನ್ನ ಸಿಎ, ಮೂಲೆ ನಿವೇಶನಗಳನ್ನು ಹರಾಜು ಹಾಕಲು ಮುಂದಾಗಿರುವುದು ಮುಡಾವನ್ನು ದಿವಾಳಿಯತ್ತ ಕೊಂಡೊಯ್ಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು.


ಹೊಸ ಬಡಾವಣೆ ನಿರ್ಮಾಣ ಕೈಗೊಳ್ಳದಿರುವುದರಿಂದಾಗಿ ಮುಡಾಗೆ ಈಗಾಗಲೇ ಆದಾಯ ಬರುತ್ತಿಲ್ಲ. ಆದರೂ ಈಗ ತನ್ನಲ್ಲಿರುವ ಖಾಲಿ ನಿವೇಶನಗಳನ್ನು ಮಾರಾಟ ಮಾಡಿ ಆದಾಯ ಪಡೆದು ಅದನ್ನೂ ಖಾಲಿ ಮಾಡಿದ ಬಳಿಕ ನಿರ್ವಹಣೆಗಾಗಿ ಈಗಿನ ಮುಡಾ ಕಚೇರಿ ಕಟ್ಟಡವನ್ನೇ ಬಾಡಿಗೆಗೆ ನೀಡಬೇಕಾದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಜತೆಗೆ ನೌಕರರಿಗೆ ಸಂಬಳ ನೀಡಲು ಹಣವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಸಭೆಯಲ್ಲಿ ಅನುಮೋದನೆ ಪಡೆಯದೆ ನಿವೇಶನ ಮಾರಾಟಕ್ಕೆ ಮುಂದಾಗಿರುವುದು ಸರಿಯಲ್ಲ. ಹೀಗಾಗಿ ಕೂಡಲೇ ಹರಾಜು ಪ್ರಕ್ರಿಯೆ ಕೈ ಬಿಡಬೇಕೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಈಗಾಗಲೇ ಪಾಲಿಕೆಗೆ ಹಸ್ತಾಂತರಿಸಿರುವ ಬಡಾವಣೆಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಮುಡಾ ಮುಂದಾಗಿದೆ. ನಿಧಿ 1ರಿಂದ 374 ಕೋಟಿ ರೂ. ಹಸ್ತಾಂತರಿಸಿದ ಬಡಾವಣೆಗಳ ಕಾಮಗಾರಿಗಳಿಗೆ ಬಳಕೆ ಮಾಡುತ್ತಿದೆ. ಈಗಾಗಲೇ ಈ ಬಡಾವಣೆಗಳಿಂದ ಪಾಲಿಕೆಗೆ ಕಂದಾಯ, ಶುಲ್ಕ ಮೊದಲಾದವುಗಳ ರೀತಿಯಲ್ಲಿ ಆದಾಯ ಬರುತ್ತಿದೆ. ಹೀಗಿದ್ದರೂ ಪಾಲಿಕೆ ವಶದಲ್ಲಿರುವ ಬಡಾವಣೆಗಳಿಗೆ ಮುಡಾ ತನ್ನ ಹಣವನ್ನು ಖರ್ಚು ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ರಸ್ತೆಗಳಲ್ಲಿ ಕಂಡುಬರುವ ಹಳ್ಳಕೊಳ್ಳ ಮೊದಲಾದವುಗಳ ದುರಸ್ತಿಗೆ ಹಣ ಬಳಸಲಿ, ಅದನ್ನು ಬಿಟ್ಟು ಅನಗತ್ಯವಾಗಿ ವೆಚ್ಚ ಮಾಡುವುದು ಬೇಡ ಎಂದು ತಾಕೀತು ಮಾಡಿದರು.
ಅಧಿಕಾರಿಗಳು ಹಾಗೂ ಸಚಿವರ ಸಂಬಂಧಿಕರಿಗೆ ಹಲವಾರು ಗುತ್ತಿಗೆ ನೀಡಿರುವುದು, ಮಳೆಗಾಲದಲ್ಲಿ ರಸ್ತೆಗಳಿಗೆ ಡಾಂಬರು ಹಾಕುವುದು ಮೊದಲಾದವುಗಳಿಂದ ಕಾಮಗಾರಿ ಗುಣಮಟ್ಟ ಹಾಳಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಖಂಡರಾದ ಶ್ರೀನಿವಾಸ್, ಮಹದೇವಸ್ವಾಮಿ, ಮಹದೇವಪ್ಪ, ಶಿವಕುಮಾರ್, ರಮೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net