

ಮಡಿಕೇರಿ: ಜಿಲ್ಲೆಯ ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ಯಾಡಿ ಗ್ರಾಮಕ್ಕೆ ಬೆಂಗಳೂರಿನ ಪ್ರಣವ್ ಫೌಂಡೇಷನ್ ವತಿಯಿಂದ ಕಾಲು ಸೇತುವೆ ನಿರ್ಮಿಸಿ ಅಡಕೆ ಪಾಲ ಸಮಸ್ಯೆಗೆ ಅಂತ್ಯ ಹಾಡಲಾಗಿದೆ.
ಅತ್ಯಾಡಿ ಗ್ರಾಮದಲ್ಲಿ ಜೋರು ಮಳೆ ಬಂದರೆ ಉಂಬಾಳೆ ಹೊಳೆ ತುಂಬಿ ಹರಿದು ಇಡೀ ಗ್ರಾಮ ದ್ವೀಪವಾಗಿ ಬದಲಾಗುತ್ತದೆ. ಮಳೆಗಾಲದ ಸಂದರ್ಭದಲ್ಲಿ ಜನರು ಹೋಗಲು ಸಾಧ್ಯವಾಗದೆ ಮನೆಯಲ್ಲಿ ಕುಳಿತು, ಹೊಳೆ ನೀರಿನ ಮಟ್ಟ ಕಡಿಮೆಯಾಗುವವರೆಗೆ ಕಾಯುತ್ತ ಕೂರುವ ಪರಿಸ್ಥಿತಿ ಇದೆ. ಕೋವಿಡ್ ಸಮಯದಲ್ಲಿ ಜನರು ಹೇಗೆ ಮನೆಯಲ್ಲೇ ಕಾಲ ಕಳೆಯಬೇಕಾಯಿತೋ, ಹಾಗೆಯೇ ಮಳೆ ಬಂದರೆ ಅತ್ಯಾಡಿ ಗ್ರಾಮ ಮಳೆಗಾಲದಲ್ಲಿ ಮನೆಯಲ್ಲಿ ಉಳಿಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಎಲ್ಲ ಸಮಸ್ಯೆಗಳಿಗೆ ಅಂತ್ಯ ಹಾಡಿದ ಪ್ರಣವ್ ಫೌಂಡೇಶನ್ ನೂತನ ಕಾಲು ಸೇತುವೆ ನಿರ್ಮಿಸಿ ಗ್ರಾಮಸ್ಥರ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದೆ.
ಅತ್ಯಾಡಿ ಗ್ರಾಮದಲ್ಲಿ 9 ಕುಟುಂಬಗಳಿದ್ದು, ವಿದ್ಯಾರ್ಥಿಗಳು ಸೇರಿ 35ಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ. ಇವರಿಗೆ ಉಂಬಳೆ ಹೊಳೆ ದಾಟಲು ಈ ಹಿಂದೆ ಅಡಕೆ ಪಾಲವೆ ಆಸರೆಯಾಗಿತ್ತು. ಅಲ್ಲದೆ, ಪ್ರತಿವರ್ಷ ಗ್ರಾಮಸ್ಥರೇ ಹಣ ಹೊಂದಿಸಿ ಅಡಕೆ ಪಾಲದ ಸೇತುವೆ ನಿರ್ಮಿಸಿಕೊಳ್ಳುತ್ತಿದ್ದರು. ಪಂಚಾಯಿತಿ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ. ಸಮಸ್ಯೆಯನ್ನು ಅರಿತ ಪ್ರಣವ್ ಫೌಂಡೇಷನ್ ಗ್ರಾಮಸ್ಥರ ಒಳಿತಿಗಾಗಿ ನಿಂತು ಸೇತುವೆ ನಿರ್ಮಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
2024ರ ಮೇ ತಿಂಗಳ ಕೊನೆಯ ವಾರದಲ್ಲಿ ಪ್ರಣವ್ ಫೌಂಡೇಷನ್ ತಂಡಕ್ಕೆ ಅತ್ಯಾಡಿ ಗ್ರಾಮದ ಸಮಸ್ಯೆ ಕುರಿತು ಮಾಹಿತಿ ಸಿಕಿತ್ತು. ಜೂ.1 ರಂದು ಸ್ಥಳಕ್ಕೆ ಭೇಟಿ ನೀಡಿದ ತಂಡ ನೈಜ ಸಮಸ್ಯೆಯನ್ನು ಅರಿಯಿತು. ಬಳಿಕ ಕೆಲ ತಜ್ಞರು ಹಾಗೂ ಸ್ಥಳೀಯರ ಜತೆಗಿನ ಮಾತುಕತೆಯಿಂದ, ಇದಕ್ಕೆ ತಾತ್ಕಾಲಿಕವಾಗಿ ಕಾಲು ಸೇತುವೆ ನಿರ್ಮಿಸಲು ಸಾಧ್ಯವಿದೆ ಎಂದು ಮಾಹಿತಿ ಪಡೆದರು. ನಂತರದ ದಿನಗಳಲ್ಲಿ ಪ್ರಣವ್ ಫೌಂಡೇಷನ್ ತಂಡ ತೂಗುಸೇತುವೆಗಳ ಸರದಾರ ಎಂದೇ ಪ್ರಖ್ಯಾತಿ ಪಡೆದ ಪದ್ಮಶ್ರೀ ಗಿರೀಶ್ ಭಾರದ್ವಾಜ್ ಅವರ ತಂಡವನ್ನು ಸಂಪರ್ಕಿಸಿತು. ಈ ತಂಡ ಪ್ರಣವ್ ಫೌಂಡೇಷನ್‌ನ ಮನವಿಗೆ ಕೂಡಲೇ ಸ್ಪಂದಿಸಿ ಜೂ.17ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಬಳಿಕ ಯೋಜನೆ ರೂಪಿಸಿ, ಜೂ.25 ರಂದು ಪ್ರಣವ್ ಫೌಂಡೇಷನ್ ಟ್ರಸ್ಟಿಗಳು ಹಾಗೂ ಸದಸ್ಯರು ಕೊಡಗು ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಯೋಜನೆ ಕುರಿತು ಮಾಹಿತಿ ಹಾಗೂ ಮನವಿ ಪತ್ರ ಸಲ್ಲಿಸಿ ಅನುಮತಿ ಪಡೆದುಕೊಂಡಿತು ಎನ್ನುತ್ತಾರೆ ಪ್ರಣವ್ ಫೌಂಡೇಷನ್ ಮಾಧ್ಯಮ ಸಲಹೆಗಾರ ಯು.ಎಚ್.ಕಾರ್ತಿಕ್ ಭಟ್.
13 ದಿನದಲ್ಲಿ ಮುಗಿದ ಕಾಮಗಾರಿ:
ಆ.10ರಂದು ಕಾಲುಸೇತುವೆಯ ಕಾಮಗಾರಿ ಆರಂಭವಾಯಿತು. ಆ.22ಕ್ಕೆ ಸೇತುವೆ ನಿರ್ಮಾಣ ಹಾಗೂ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಸೇತುವೆಯನ್ನು ಉಕ್ಕಿನಿಂದ ಮಾಡಲಾಗಿದೆ. 24 ಮೀಟರ್ ಉದ್ದ, 0.75 ಮೀಟರ್ ಅಗಲವಿದೆ. ಒಂದೇ ಬಾರಿಗೆ 10 ಜನರು ನಿಲ್ಲಬಹುದಾಗಿದೆ. ಅಲ್ಲದೆ, ಈ ಸೇತುವೆ ಸಂಪೂರ್ಣ ನಿರ್ವಹಣೆಯನ್ನು ಪ್ರಣವ್ ಫೌಂಡೇಷನ್ ವಹಿಸಿಕೊಂಡಿದೆ.
ಜನಪ್ರತಿನಿಧಿಗಳ ಸಹಕಾರ: ಸೇತುವೆ ನಿರ್ಮಾಣಕ್ಕೂ ಮುನ್ನ ಮೈಸೂರು ಲೋಕಸಭಾ ಕೇತ್ರದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್ ಹಾಗೂ ಅತ್ಯಾಡಿ ಗ್ರಾಮಸ್ಥರು ಹಾಗೂ ಕೊಡಗು ಜಿಲ್ಲೆಯ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಶನ್, ಟೀಮ್ 12 ಆಫ್ ರೋಡರ್ಸ್ ಮತ್ತು ಮಲ್ನಾಡ್ ಯೂತ್ ಅಸೋಸಿಯೇಶನ್ ಸಂಪೂರ್ಣ ಬೆಂಬಲ ನೀಡಿದೆ ಎಂದು ಕಾರ್ತಿಕ್ ಭಟ್ ಹೇಳಿದ್ದಾರೆ.
ಪ್ರಣವ ಸೇತು ಇಂದು ಹಸ್ತಾಂತರ
ಪ್ರಣವ್ ಫೌಂಡೇಷನ್‌ನಿಂದ ನಿರ್ಮಿಸಿರುವ ಕಾಲು ಸೇತುವೆಗೆ ಪ್ರಣವ ಸೇತು ಎಂದು ನಾಮಕರಣ ಮಾಡಲಾಗಿದೆ. ಕಾಲು ಸೇತುವೆಯನ್ನು ಗ್ರಾಮಸ್ಥರಿಗೆ ಹಸ್ತಾಂತರ ಮಾಡುವ ಕಾರ್ಯಕ್ರಮ ಆ.25ರ ಬೆಳಗ್ಗೆ 11.30 ಗಂಟೆಗೆ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಅತ್ಯಾಡಿ ಗ್ರಾಮಸ್ಥರು ಹಾಗೂ ಪ್ರಣವ್ ಫೌಂಡೇಷನ್‌ನ ಅಧ್ಯಕ್ಷ ರಾಕೇಶ್ ರೈ, ಸ್ಥಾಪಕ ಕಾರ್ಯದರ್ಶಿ ನಾಗರಾಜ ಹೆಬ್ಬಾಳ್, ಟ್ರಸ್ಟಿಗಳಾದ ಕೆ.ಪಿ.ರಕ್ಷಿಣ್, ಮಂಜುನಾಥ ಭಟ್, ಮಹೇಶ್ ಮೇನಾಲ, ನೇತ್ರ, ಯೋಜನೆಯ ಸಂಚಾಲಕರಾದ ದೇವಿಪ್ರಸಾದ್, ಕಿರಣ್ ಅಟ್ಲೂರು ಇತರರು ಪಾಲ್ಗೊಳ್ಳಲಿದ್ದಾರೆ.
ಅತ್ಯಾಡಿ ಗ್ರಾಮಸ್ಥರ ಸಮಸ್ಯೆ ಅರಿತು ಪ್ರಣವ್ ಫೌಂಡೇಷನ್‌ನಿಂದ ಸೇತುವೆ ನಿರ್ಮಿಸಲಾಗಿದೆ. ಸುಮಾರು 2.50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಸಂಪೂರ್ಣ ನಿರ್ವಹಣೆ ಫೌಂಡೇಷನ್ ವಹಿಸುತ್ತದೆ. ಸಾಮಾಜಿಕ ಸೇವೆ ಮುಂದಿನ ದಿನಗಳಲ್ಲಿಯೂ ಮುಂದುವರಿಯಲಿದೆ. ಆ.25ರಂದು ಅತ್ಯಾಡಿ ಗ್ರಾಮಸ್ಥರಿಗೆ ಸೇತುವೆಯನ್ನು ಹಸ್ತಾಂತರ ಮಾಡಲಾಗುವುದು.
ಯು.ಎಚ್.ಕಾರ್ತಿಕ್ ಭಟ್ ಮಾಧ್ಯಮ ಸಲಹೆಗಾರ, ಪ್ರಣವ್ ಫೌಂಡೇಷನ್
ಕಳೆದ 2020ರಲ್ಲಿ ಬೆಂಗಳೂರಿನಲ್ಲಿ ಪ್ರಣವ್ ಫೌಂಡೇಷನ್ ಆರಂಭವಾಗಿದೆ. ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಕ್ಷೇತ್ರಗಳಲ್ಲಿ ಸುಧಾರಣೆ ತರುವ ಕೆಲಸಗಳನ್ನು ಮಾಡುತ್ತಿದೆ. ಅಲ್ಲದೆ, ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡಿದೆ. ಕೊಡಗು ಜಿಲ್ಲೆಯಲ್ಲೂ 500ಕ್ಕೂ ಅಧಿಕ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ನೀಡಲಾಗಿದೆ.
ಯು.ಎಚ್.ಮಂಜುನಾಥ್ ಭಟ್ ಟ್ರಸ್ಟಿ, ಪ್ರಣವ್ ಫೌಂಡೇಷನ್
ಮಳೆಗಾಲದ ಸಂದರ್ಭದಲ್ಲಿ ಉಂಬಾಳೆ ಹೊಳೆ ತುಂಬಿ ಹರಿಯುವ ಪರಿಣಾಮ ಇಲ್ಲಿನ ನಿವಾಸಿಗಳಿಗೆ, ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿತ್ತು. ಜನಪ್ರತಿನಿಧಿಗಳಿಗೆ, ಗ್ರಾಮ ಪಂಚಾಯಿತಿಗೆ ಮನವಿ ನೀಡಿದರೂ ಯಾವುದೇ ಸ್ಪಂದನೆ ಇರಲಿಲ್ಲ. ಆದರೆ, ಸಂಕಷ್ಟ ಅರಿತ ಪ್ರಣವ್ ಫೌಂಡೇಷನ್ ಸೂಕ್ತವಾದ ಕಾಲು ಸೇತುವೆ ನಿರ್ಮಿಸಿ ಅನುಕೂಲ ಮಾಡಿಕೊಟ್ಟಿದೆ.
ಮನೋಜ್ ಕುಮಾರ್ ಅತ್ಯಾಡಿ, ನಿವಾಸಿ