ಅಟ್ಟುಪ್ಪೆ ಗ್ರಾಮಕ್ಕೆ ಮೂಲ ಸೌಲಭ್ಯ ಕಲ್ಪಿಸಿ

IMG-20250601-WA0198
ಕೆ.ಆರ್.ಪೇಟೆ ತಾಲೂಕಿನ ಅಟ್ಟುಪ್ಪೆ ಗ್ರಾಮದಲ್ಲಿ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
Published on

ಕೆ.ಆರ್.ಪೇಟೆ: ತಾಲೂಕಿನ ಬೂಕನಕೆರೆ ಹೋಬಳಿಯ ಅಟ್ಟುಪ್ಪೆ ಗ್ರಾಮದಲ್ಲಿ ಮೂಲ ಸೌಲಭ್ಯಗಳ ಕೊರತೆ ಉಂಟಾಗಿದ್ದು, ಚರಂಡಿಗಳು ಸ್ವಚ್ಛತೆ ಕಾಣದೆ ಗಬ್ಬೆದ್ದು ನಾರುತ್ತಿವೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಬೀತಿ ಉಂಟಾಗಿದ್ದು, ಕೂಡಲೇ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಅಟ್ಟುಪ್ಪೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟುನಿಂತು ಎರಡು ವರ್ಷಗಳು ಕಳೆದಿದ್ದರೂ ಇಲ್ಲಿಯವರೆಗೂ ರಿಪೇರಿ ಮಾಡಿಲ್ಲ. ಗ್ರಾಮದ ಚರಂಡಿಗಳಲ್ಲಿ ಕೊಳಚೆ ನೀರು ಮತ್ತು ಹೂಳು ತುಂಬಿಕೊಂಡು ಗಬ್ಬೆದ್ದು ನಾರುತ್ತಿವೆ. ಗ್ರಾಮಸ್ಥರು ಮೂಗು ಮುಚ್ಚಿಕೊಂಡು ತಿರುಗಾಡಬೇಕಾದ ದುಸ್ಥಿತಿ ಇದೆ. ಕೆಲವು ಕಡೆ ಚರಂಡಿಯೇ ಇಲ್ಲದೇ ಕೊಳಚೆ ನೀರು ರಸ್ತೆ ಹಾಗೂ ಮನೆಗಳ ಮುಂದೆ ಹರಿಯುತ್ತಿದೆ. ಈ ಸಂಬಂಧ ಪಿಡಿಒ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದರು.

ಮಳೆಗಾಲ ಆಗಿರುವುದರಿಂದ ಮಳೆ ಬಿದ್ದಾಗ ಚರಂಡಿಗಳು ತುಂಬಿ ನೀರು ಮುಂದೆ ಹೋಗಲು ಸಾಧ್ಯವಾಗದೆ, ಅಕ್ಕ ಪಕ್ಕದ ಮನೆಗಳಿಗೆ ನುಗುತ್ತಿದೆ. ಸೊಳ್ಳೆಗಳು ಹೆಚ್ಚಾಗಿದ್ದು ಕಾಯಿಲೆಗಳು ಹರಡಲು ಕಾರಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಲು ಗಮನಹರಿಸಬೇಕು ಎಂದು ಆಗ್ರಹಿಸಿದರು.

ಗ್ರಾಮದ ಮುಖಂಡರಾದ ಕುಮಾರ್, ರಂಗಬೋಳೆಗೌಡ, ಜಯಲಕ್ಷ್ಮೀ ಕೃಷ್ಣೇಗೌಡ, ಶಿವೇಗೌಡ, ರೇವನಾಯಕ್, ಕೃಷ್ಣೇಗೌಡ, ನಾಗೇಶ್, ಗೋವಿಂದೇಗೌಡ, ಸುಂದರಮ್ಮ, ಪುಟ್ಟೇಗೌಡ, ಅನು ನಾಗೇಶ್, ಗ್ರಾಮಸ್ಥರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net