

ರಾಮನಗರ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ಪೂರಕ ವಾತಾವರಣ ಹಾಗೂ ಅಗತ್ಯ ಸೌಕರ್ಯಗಳಿದ್ದು, ಅದನ್ನು ಸದುಪಯೋಗಪಡಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವಂತೆ ಹಾಗೂ ಇತರ ಸಂಬಂಧಿತ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ವಿವಿಧ ಇಲಾಖೆ ಅಧಿಕಾರಿಗಳಿಗೆ ನಿರ್ದೇಶ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಪ್ರವಾಸೋದ್ಯಮ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ವಾತನಾಡಿದ ಅವರು, ಕೇಂದ್ರ ಪ್ರವಾಸೋದ್ಯಮ ಇಲಾಖೆ ಅನುಮೋದನೆ ನೀಡಿರುವ 2.91 ಕೋಟಿ ರೂ.ಗಳನ್ನು ನಿವೇಶನ ಅಭಿವೃದ್ಧಿ ಕಾಮಗಾರಿಗಳಡಿ ವಾಗಡಿ ಕೋಟೆಯ ಸಂರಕ್ಷಣಾ ಕಾಮಗಾರಿಯನ್ನು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಪೂರ್ಣಗೊಳಿಸಲಾಗಿದೆ.
ಬೆಂಗಳೂರು ಮೈಸೂರು ಹೆದ್ದಾರಿಯಿಂದ 10 ಕಿಲೋ ಮೀಟರ್ ದೂರದಲ್ಲಿ ಕಣ್ವ ಜಲಾಶಯ ಹಾಗೂ ವಾಗಡಿ ಸಮೀಪವಿರುವ ಮಂಚನಬೆಲೆ ಜಲಾಶಯಗಳಲ್ಲಿ ಸೈಲ್ ಬೋಟ್ ರೈಡ್, ಸ್ಪೀಡ್ ಬೋಟ್, ರೈಡ್ ಆನ್ ಓವರ್ ಕ್ರಾಫ್ಟ್, ಬಂಪರ್ ಬೋಟ್ ರೈಡ್, ಬನಾನ ರೈಡ್ ಕ್ರಾಫ್ಟ್, ಜೆಟ್ ಸ್ಕೀ ರೈಡ್, ಸ್ಟಾಂಡ್ ಆಫ್ ಸರ್ಫಿಂಗ್ ರೈಡ್, ಕಯಾಕಿಂಗ್, ಪ್ಯಾರಾ ಮೋಟರಿಂಗ್, ಮುಂತಾದ ಜಲಸಾಹಸ ಚಟುಚಟಿಕೆಗಳು ಹಾಗೂ ಮನರಂಜನಾ ಚಟುವಟಿಕೆಗಳು ಆಯೋಜಿಸುವುದರಿಂದ ಜಿಲ್ಲೆಯ ಪ್ರ್ರವಾಸೋದ್ಯಮಕ್ಕೆ ಲಾಭದಾಯಕವಾಗುತ್ತದೆ. ಆದ್ದರಿಂದ ಜಲಸಾಹಸ ಚಟುವಟಿಕೆಗಳನ್ನು ಕೈಗೊಳ್ಳಲು ಕ್ರಮವಹಿಸುವಂತೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಿಗೆ ತಿಳಿಸಿದರು.
ರಾಮನಗರ ತಾಲೂಕಿನಲ್ಲಿ ಅಚ್ಚಲು ಬೆಟ್ಟದಲ್ಲಿ ಹ್ಯಾಂಡ್ ರೈಲಿಂಗ್, ಹಾರೋಹಳ್ಳಿ ಚಾಮುಂಡೇಶ್ವರಿ ಬೆಟ್ಟದ ಬಳಿ ಸೋಲಾರ್ ಲೈಟ್ ಡ್ರೈನೆಜ್ ರಂಗರಾಯನದೊಡ್ಡಿಕೆರೆಯ ಪರಿಮಿತಿಯಲ್ಲಿ ಹ್ಯಾಂಡ್ ರೈಲ್, ಸೋಲಾರ್ ಲೈಟ್ ಆರ್ನೋಮೆಂಟ್‌ಗ್ರೀಲ್ ವರ್ಕ್ ಬೋಟಿಂಗ್, ಶ್ರೀ ರೇವಣ ಸಿದ್ದೇಶ್ವರ ಬೆಟ್ಟದಲ್ಲಿ ಸೋಲಾರ್ ಲೈಟ್, ಲಿಫ್ಟ್ ಹಾಗೂ ಹ್ಯಾಂಡ್ ರೈಲ್, ರಸ್ತೆ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದ್ದು, ಅನುದಾನ ಬಿಡುಗಡೆ ಆದ ನಂತರ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಯೋಜನೆ ರೂಪಿಸಿ
ಜಿಲ್ಲೆಯಲ್ಲಿ ರಾಕ್ ಕ್ಲೈಂಬಿಂಗ್, ಚಾರಣ ಮತ್ತು ವಾಟರ್ ಸ್ಟೋರ್ಟ್ಸ್ ಅನ್ನು ಕಣ್ವ, ಮಂಚನಬೆಲೆ ಮತ್ತು ವೈ.ಜಿ.ಗುಡ್ಡಗಳಲ್ಲಿ ಪ್ರಾರಂಭಿಸಲು ಕಾನೂನಾತ್ಮಕವಾಗಿ ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸುವಂತೆ ಹಾಗೂ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಜಿಲ್ಲಾಡಳಿತ ಸಿದ್ಧವಿರುವುದಾಗಿ, ಸಂಗಮ-ಮೇಕೆದಾಟು ಪ್ರವಾಸಿ ತಾಣವನ್ನು ಪ್ರವಾಸಿಗರು ವೀಕ್ಷಣೆ ವಾಡಲು ಅನುಕೂಲ ವಾಡಿಕೊಡಲು ಕ್ರಮವಹಿಸುವಂತೆ ತಿಳಿಸಿದರು. ಸಾಹಸ ಪ್ರವಾಸೋದ್ಯಮಕ್ಕಾಗಿ ಶ್ರೀ ಕಬ್ಬಾಳು ಬೆಟ್ಟ, ಸಾವನದುರ್ಗ, ಶ್ರೀ ರಾಮದೇವರ ಬೆಟ್ಟ, ಹಂದಿಗುಂದಿ ಬೆಟ್ಟ, ಶ್ರೀ ಲಕ್ಷೀ ನರಸಿಂಹಸ್ವಾಮಿ ಬೆಟ್ಟ, ಅಚ್ಚಲು ಬೆಟ್ಟ, ಕೂನಗಲ್ಲು ಬೆಟ್ಟ, ಭೀಮನಕಿಂಡಿ ಬೆಟ್ಟ, ಜಲಸಾಹಸ ಪ್ರವಾಸೋದ್ಯಮಕ್ಕಾಗಿ ಕಣ್ವ ಜಲಾಶಯ, ಮಂಚಲಬೆಲೆ ಜಲಾಶಯ, ವೈ.ಜಿಗುಡ್ಡ, ಇಗ್ಗಲೂರು ಜಲಾಶಯ, ವನ್ಯ ಜೀವಿ ಪ್ರವಾಸೋದ್ಯಮಕ್ಕಾಗಿ ರಾಮದೇವರ ಬೆಟ್ಟ ರಣಹದ್ದು ವನ್ಯ ಜೀವಿಧಾಮಗಳನ್ನು ಅಭಿವೃದ್ಧಿ ಪಡಿಸಲು ಯೋಜನೆಯನ್ನು ತಯಾರಿಸುವಂತೆ ಡಿಸಿ ತಿಳಿಸಿದರು.
ಜಿಲ್ಲಾ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳ ಮಾಲೀಕರ ಸಂಘದ ಅಧ್ಯಕ್ಷ ವಿಜಯದೇವ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ಯುವಜನ ಮತ್ತು ಸಬಲೀಕರಣ ಇಲಾಖೆಯ ಸಹನಿರ್ದೇಶಕಿ ಅನಿತಾ, ಕೆಎಸ್.ಟಿಡಿಸಿ ಅಧಿಕಾರಿಗಳು, ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳು, ಹೋಂ ಸ್ಟೇ ಮತ್ತು ರೆಸಾರ್ಟ್‌ಗಳ ವಾಲೀಕರು ಹಾಗೂ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.