ದಾಖಲೆ ಪೂರೈಕೆಗೆ ಬೇಕಾಬಿಟ್ಟಿ ಹಣ ವಸೂಲಿ

Menace of middlemen in Kundagola Tehsildar office
Published on

ಕುಂದಗೋಳ: ಪಟ್ಟಣದಲ್ಲಿ ತಹಸೀಲ್ದಾರ್ ಕಚೇರಿಯಲ್ಲಿ ಕೈ ಬಿಸಿ ಮಾಡಿದರೆ (ಲಂಚ ಕೊಟ್ಟರೆ) ಹಾಗೂ ಏಜೆಂಟರ ಮೂಲಕ ಹೋದರಷ್ಟೇ ಎಲ್ಲ ಕೆಲಸಗಳು ಸುಲಭವಾಗಿ ಆಗುತ್ತವೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಇದಕ್ಕೆ ಪುಷ್ಟಿ ಎನ್ನುವಂತೆ ಕಚೇರಿಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬ ತನ್ನ ಪತ್ನಿಯ ಖಾತೆಗೆ ಯುಪಿಐ ಮೂಲಕ ಹಣ ಹಾಕಿಸಿಕೊಂಡು ಸಾರ್ವಜನಿಕರೊಬ್ಬರಿಗೆ ದಾಖಲೆ ಪೂರೈಸಿರುವುದು ಜಗಜ್ಜಾಹೀರಾಗಿದೆ.

ತಾಲೂಕಿನ ಗುಡಗೇರಿ ಗ್ರಾಮದ ಶಿವಕುಮಾರ ಹೂಗಾರ ಎಂಬುವರು ಅಭಿಲೇಖಾಲಯದಿಂದ (ರೆಕಾರ್ಡ್ ರೂಂ) ತಮ್ಮ ಜಮೀನಿಗೆ ಸಂಬಂಧಿಸಿದ ಹಳೇ ದಾಖಲೆ ಪೂರೈಸುವಂತೆ ಮೂರು ತಿಂಗಳು ಹಿಂದೆಯೇ ಅರ್ಜಿ ಸಲ್ಲಿಸಿದ್ದರು. ಇವರು ಪದೇಪದೆ ಕಚೇರಿಗೆ ಅಲೆದರೂ ದಾಖಲೆ ಕೊಡಲು ಸತಾಯಿಸಲಾಗುತ್ತಿತ್ತು. ಕೊನೆಗೆ ಕಚೇರಿಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಹರೀಶ ಮಂಟೂರ ಎಂಬಾತ ತನ್ನ ಪತ್ನಿಯ ಖಾತೆಗೆ ಯುಪಿಐ ಮೂಲಕ 2600 ರೂಪಾಯಿ ಪಾವತಿಸಿಕೊಂಡು ದಾಖಲೆ ಕೊಟ್ಟಿರುವುದು ಬೆಳಕಿಗೆ ಬಂದಿದೆ.

ತಹಸೀಲ್ದಾರ್ ಕಚೇರಿಯ ರೆಕಾರ್ಡ್ ರೂಂನಲ್ಲಿ ಕಾರ್ಯನಿರ್ವಹಿಸುವ ಹರೀಶ ಮಂಟೂರ ಎಂಬಾತ ಸರ್ಕಾರಿ ಇಲ್ಲವೇ ಗುತ್ತಿಗೆ ನೌಕರ ಅಲ್ಲ. ಹಲವು ವರ್ಷಗಳಿಂದ ಅನಧಿಕೃತವಾಗಿ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದಾನೆ. ನಮ್ಮ ಕುಟುಂಬದ ಜಮೀನಿನ ಡ ಉತಾರ ಪೂರೈಸಲು ನಿಗದಿತ ಸಮಯದಲ್ಲಿ ಕೊಡದೇ ಸತಾಯಿಸುತ್ತಿದ್ದ. ಡ ಉತಾರ ಒಂದು ಪುಟಕ್ಕೆ 14 ರೂಪಾಯಿ ಶುಲ್ಕ ಇದೆ. ಆದರೆ, ಈತ 20 ಪುಟಗಳ ಡ ಉತಾರ ಪೂರೈಸಲು 280 ರೂಪಾಯಿ ಬದಲಿಗೆ ಹೆಚ್ಚಿನ ಹಣ ಕೇಳುತ್ತಿದ್ದ. ಕೊನೆಗೆ ಆತನ ಪತ್ನಿಯ ಖಾತೆಗೆ ಯುಪಿಐ ಮೂಲಕ 2600 ರೂಪಾಯಿ ಹಾಕಿದಾಗಲೇ ದಾಖಲೆ ಕೊಟ್ಟಿದ್ದಾನೆ ಎಂದು ಶಿವಕುಮಾರ ಹೂಗಾರ ಎಂಬುವರು ದಾಖಲೆ ಪ್ರದರ್ಶಿಸಿದರು.

ಹೆಚ್ಚಿನ ಹಣ ಪಡೆದ ಘಟನೆ ನನ್ನ ಗಮನಕ್ಕೆ ಬಂದಿದೆ. ನಾನು ಈಗಾಗಲೇ ಆ ವ್ಯಕ್ತಿಯನ್ನು ಕಚೇರಿಯಿಂದ ಹೊರಹಾಕಿದ್ದೇನೆ. ಕಚೇರಿಯಲ್ಲಿ ಸರ್ಕಾರಿ ಶುಲ್ಕಕ್ಕಿಂತ ಹೆಚ್ಚಿಗೆ ಹಣ ಯಾರಾದರೂ ಕೇಳಿದರೆ ಹಾಗೂ ಸಾರ್ವಜನಿಕರ ಕೆಲಸ ವಿಳಂಬ ಮಾಡಿದರೆ, ನೇರವಾಗಿ ನನ್ನನ್ನು ಭೇಟಿ ಮಾಡಿ. ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳುತ್ತೇನೆ. ರಾಜು ಮಾವರಕರ, ಕುಂದಗೋಳ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net