’ಆಟಿ ಡೊಂಜಿ ದಿನ ಬಂಟೆರೆನ ಸಮ್ಮಿಲನ-೨೦೨೪’

'Atti Donji Dina Banterena Sammilana-2024'
Published on

ಮಡಿಕೇರಿ:

ಕೊಡಗು ಜಿಲ್ಲಾ ಯುವ ಬಂಟ್ಸ್ ಅಸೋಸಿಯೇಷನ್ ಮತ್ತು ಮಡಿಕೇರಿ ನಗರ ಬಂಟರ ಮಹಿಳಾ ಘಟಕ ವತಿಯಿಂದ ಆ. ೪ಕ್ಕೆ ಮಡಿಕೇರಿಯಲ್ಲಿ ೨ನೇ ವರ್ಷದ ’ಆಟಿ ಡೊಂಜಿ ದಿನ ಬಂಟೆರೆನ ಸಮ್ಮಿಲನ-೨೦೨೪’ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜನಾಂಗ ಬಾಂಧವರಿಗಾಗಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ದಿನಪೂರ್ತಿ ನಡೆಯುವ ಕಾರ್ಯಕ್ರಮದಲ್ಲಿ ಆಟಿ ತಿಂಗಳಿನ ವೈವಿಧ್ಯಮಯ ಖಾದ್ಯ ಪ್ರದರ್ಶನ, ಪುರಷರಿಗೆ ವಾಲಿಬಾಲ್, ಫುಟ್‌ಬಾಲ್, ಮಹಿಳೆಯರಿಗೆ ಹಗ್ಗಜಗ್ಗಾಟ, ಮಕ್ಕಳಿಗೆ ವಿವಿಧ ಕ್ರೀಡೆ ಮತ್ತು ಮನೋರಂಜನಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಅಂದು ಮಳೆ ಇದ್ದರೂ ಈ ಎಲ್ಲಾ ಚಟುವಟಿಕೆಗಳು ನಡೆಯಲಿದೆ ಎಂದು ಕೊಡಗು ಜಿಲ್ಲಾ ಯುವ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸದಾನಂದ ರೈ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಬೆಳಗ್ಗೆ ೯.೩೦ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ನಗರ ಬಂಟರ ಮಹಿಳಾ ಘಟಕದ ಅಧ್ಯಕ್ಷ ಸೌಮ್ಯ ಸದಾಶಿವ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಡಗು ಜಿಲ್ಲಾ ಬಂಟರ ಸಂಘದ ಗೌರವಾಧ್ಯಕ್ಷ ಐತಪ್ಪ ರೈ ಉದ್ಘಾಟನೆ ನೆರವೇರಿಸಲಿದ್ದಾರೆ. ಸಂಜೆ ೪.೩೦ಕ್ಕೆ ಜಿಲ್ಲಾ ಯುವ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸದಾನಂದ ರೈ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ.ಡಿ. ಜಗದೀಶ್ ರೈ ಸಮಾರಂಭ ಉದ್ಘಾಟಿಸಲಿದ್ದಾರೆ.

ಸಂಜೆ ೫ ಗಂಟೆಗೆ ಕಲ್ಲಡ್ಕದ ವಿಠಲ ನಾಯಕ್ ಮತ್ತು ಬಳಗದಿಂದ ವಿನೂತನ ಶೈಲಿಯ ಸಂದೇಶ ಸಂತೋಷ ಎನ್ನುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಸೋಸಿಯೇಷನ್ ಪ್ರಮುಖರಾದ ನಿತಿನ್ ರೈ, ಶಿವಪ್ರಸಾದ್ ರೈ, ಶರತ್ ಕುಮಾರ್ ಶೆಟ್ಟಿ, ರವಿಕಿರಣ್ ಶೆಟ್ಟಿ ಹಾಗೂ ಸುನಿಲ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net