ಪ್ರಾಣ ಮುಡಿಪಾಗಿಡುವುದು ಶ್ರೇಷ್ಠ: ಶಿವಮೊಗ್ಗ ಧರ್ಮಪ್ರಾಂತ ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೆರಾವೊ

Published on

ಕಾರ್ಕಳ: ಹಣ ಮತ್ತು ಆಸ್ತಿಯನ್ನು ಬಡವರಿಗೆ ದಾನ ಮಾಡುವುದು ಶ್ರೇಷ್ಠ ಕಾರ್ಯ. ಆದರೆ ಪ್ರಾಣವನ್ನೇ ಇತರರಿಗೆ ಮುಡಿಪಾಗಿಟ್ಟು ಸೇವಾ ಕಾರ್ಯ ಮಾಡುವುದು ಅತ್ಯಂತ ಶ್ರೇಷ್ಠ. ಸಂತ ಲಾರೆನ್ಸರು ತಮ್ಮ ಜೀವವನ್ನೇ ಬಲಿ ಅರ್ಪಿಸಿ ಅಮರರಾದರು ಎಂದು ಶಿವಮೊಗ್ಗ ಧರ್ಮಪ್ರಾಂತ ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೆರಾವೊ ಅಭಿಪ್ರಾಯಪಟ್ಟರು.

ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವದಲ್ಲಿ ಪ್ರಮುಖ ಪೂಜೆ ನೆರವೇರಿಸಿ ಭಾನುವಾರ ಅವರು ಮಾತನಾಡಿದರು.

ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಏಳನೇ ದಿನ ಭಾನುವಾರ ವಾರಾಂತ್ಯವಾದ್ದರಿಂದ ಬಲಿಪೂಜೆಗಳಿಗೆ ಭಕ್ತರ ಸಂಖ್ಯೆ ಹೆಚ್ಚಿತ್ತು. ಬಸಿಲಿಕದೊಳಗೆ ದೈಹಿಕ ಅಂತರ ಕಾಪಾಡಿ, ಸ್ಥಳಾವಕಾಶ ಸಾಲದೆ ಹಾಗೂ ಹೊರಗಿನ ಆವರಣದಲ್ಲಿ ಎಲ್‌ಇಡಿ ಪರದೆಯ ಸಹಾಯದಿಂದ ಭಕ್ತರು ಬಲಿಪೂಜೆಯಲ್ಲಿ ಪಾಲ್ಗೊಂಡರು.

ಉಡುಪಿ ಸೇಂಟ್ ಮೇರಿಸ್ ಹೈಸ್ಕೂಲಿನ ಪ್ರಾಂಶುಪಾಲ ಫಾದರ್ ಜಾನ್ಸನ್ ಸಿಕ್ವೇರಾ, ಕೆಮ್ಮಣ್ಣಿನ ಫಾದರ್ ಹೆರಾಲ್ಡ್ ಪಿರೇರಾ ಹಾಗೂ ಮಂಗಳೂರು ಧರ್ಮಪ್ರಾಂತದ ಶ್ರೇಷ್ಠಗುರು ಫಾದರ್ ಮ್ಯಾಕ್ಸಿಮ್ ನೊರೋನ್ಹಾ ಭಾನುವಾರದ ಬಲಿಪೂಜೆ ನೆರವೇರಿಸಿದರು. ಮಧ್ಯಾಹ್ನಬಲಿಪೂಜೆಯನ್ನು ಶಿವಮೊಗ್ಗದ ಹಿರಿಯೂರಿನ ಫಾದರ್ ನೆಲ್ಸನ್ ಡಿಸೋಜ ನೆರವೇರಿಸಿದರು. ದಿನದ ಪ್ರಮುಖ ಬಲಿಪೂಜೆಯನ್ನು ಬೆಳಗ್ಗೆ 10 ಗಂಟೆ ಶಿವಮೊಗ್ಗದ ಧರ್ಮಾಧ್ಯಕ್ಷರಾದ ಫ್ರಾನ್ಸಿಸ್ ಸೆರಾವೊ ಅರ್ಪಿಸಿದರು.

ಇಂದಿನ ಬಲಿಪೂಜೆ

ಮಹೋತ್ಸವದ ಎಂಟನೇ ದಿನ ಸೋಮವಾರ 10 ಗಂಟೆಯ ಸಂಭ್ರಮದ ಬಲಿಪೂಜೆಯನ್ನು ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ಅಲೋಶಿಯಸ್ ಪಾವ್ಲ್ ಡಿಸೋಜ ನೆರವೇರಿಸಲಿದ್ದಾರೆ. ಉಳಿದಂತೆ ಬೆಳಗ್ಗೆ 8, 12 ಹಾಗೂ ಮಧ್ಯಾಹ್ನ 3 ಮತ್ತು ಸಂಜೆ 5 ಗಂಟೆಯ ಬಲಿಪೂಜೆಗಳು ನೆರವೇರಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net