

ಮೈಸೂರು: ಆಕಾಶ್ ಬೈಜೂಸ್ ಸಂಸ್ಥೆಯು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ರಾಷ್ಟ್ರ ಮಟ್ಟದ ವಿದ್ಯಾರ್ಥಿ ವೇತನ ಪರೀಕ್ಷೆ ಹಮ್ಮಿಕೊಂಡಿದೆ ಎಂದು ಸಂಸ್ಥೆಯ ಹಿರಿಯ ಸಹಾಯಕ ನಿರ್ದೇಶಕ ಅನಿಲ್ ಹೇಳಿದರು.
ಆಕಾಶ್ ಬೈಜೂಸ್ ನ್ಯಾಷನಲ್ ಟ್ಯಾಲೆಂಟ್ ಹಂಟ್ (ಆ್ಯಂಥೆ) ಹೆಸರಿನಲ್ಲಿ ನಡೆಯುವ ವಿದ್ಯಾರ್ಥಿ ವೇತನ ಪರೀಕ್ಷೆ ದೇಶಾದ್ಯಂತ ನ.5 ರಿಂದ 13 ರವರೆಗೆ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಹಮ್ಮಿಕೊಳ್ಳಲಾಗಿದೆ. ಸಾಕಷ್ಟು ವಿದ್ಯಾರ್ಥಿಗಳ ಬಳಿಯಲ್ಲಿ ಕಂಪ್ಯೂಟರ್, ಇಂಟರ್‌ನೆಟ್ ವ್ಯವಸ್ಥೆ ಇರುವುದಿಲ್ಲ. ಅಂಥ ವಿದ್ಯಾರ್ಥಿಗಳಿಗೋಸ್ಕರ ಆಫ್‌ಲೈನ್‌ನಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಹೆಣ್ಣು ಮಕ್ಕಳಿಗೆ, ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬದ ಮಕ್ಕಳಿಗೆ, ಕುಟುಂಬದಲ್ಲಿ ಒಂದು ಹೆಣ್ಣು ಮಗು ಅಥವಾ ಒಂಟಿ ಪಾಲಕರ(ತಾಯಿ) ಕುಟುಂಬಗಳಿಗೆ ಅನುಕೂಲವಾಗುವಂತೆ ಈ ಅಭಿಯಾನ ಆರಂಭಿಸಲಾಗಿದೆ. ಆಕಾಶ್ ಬೈಜೂಸ್ ನ್ಯಾಷನಲ್ ಟ್ಯಾಲೆಂಟ್ ಹಂಟ್‌ನಡಿಯಲ್ಲಿ ಇದುವರೆಗೆ ಒಟ್ಟು 33 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ವಿಶೇಷವಾಗಿ ಈ ಬಾರಿ ಶಿಕ್ಷಣದಲ್ಲಿ ಹೆಣ್ಣು ಮಗುವಿಗೂ ನ್ಯಾಯ ಸಿಗಬೇಕು ಹಾಗೂ ಆಕೆ ಸಬಲೀಕರಣಗೊಳ್ಳಬೇಕು ಎಂಬ ಉದ್ದೇಶದಿಂದ 2,000 ಆರ್ಥಿಕ ದುರ್ಬಲರಾಗಿರುವ ವಿದ್ಯಾರ್ಥಿನಿಯರಿಗೆ ಉಚಿತ ಎನ್‌ಇಇಟಿ, ಜೆಇಇ ಕೋಚಿಂಗ್ ಮತ್ತು ವಿದ್ಯಾರ್ಥಿ ವೇತನ ನೀಡಲಾಗುವುದು ಎಂದರು.
ಕೇವಲ ವಿದ್ಯಾರ್ಥಿ ವೇತನ ಮಾತ್ರವಲ್ಲದೆ ಉತ್ತಮ ಅಂಕ ಪಡೆದವರಿಗೆ ನಗದು ಬಹುಮಾನ, 5 ವಿದ್ಯಾರ್ಥಿಗಳು ಪಾಲಕರೊಂದಿಗೆ ನಾಸಾಕ್ಕೆ ಪ್ರವಾಸ ಕೈಗೊಳ್ಳುವ ಅವಕಾಶವನ್ನು ಕಲ್ಪಿಸಲಾಗುವುದು. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗಿನ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನದ ಸೌಲಭ್ಯ ಪಡೆಯಬಹುದು. ಹೆಚ್ಚಿನ ಮಾಹಿತಿಗೆ https://anthe.aakash.ac.in ಲಾಗಿನ್ ಆಗಬಹುದು ಎಂದು ಹೇಳಿದರು.
ವಿದ್ಯಾರ್ಥಿ ವೇತನದ ಪರೀಕ್ಷೆಯು ಆನ್‌ಲೈನ್‌ನಲ್ಲಿ ನಿಗದಿ ಪಡಿಸಿದ ಎಲ್ಲ ದಿನಗಳಲ್ಲೂ ಬೆಳಗ್ಗೆ 10 ರಿಂದ ಸಂಜೆ 7ರವರೆಗೆ ನಡೆಯಲಿದೆ. ಆಫ್‌ಲೈನ್ ಪರೀಕ್ಷೆ ನ.6 ಮತ್ತು 13 ರಂದು ಬೆಳಗ್ಗೆ 10.30 ರಿಂದ 11.30 ಹಾಗೂ ಸಂಜೆ 4 ರಿಂದ 5ರವರೆಗೆ ಆಕಾಶ್ ಬೈಜೂಸ್‌ನ ಎಲ್ಲ 285 ಕೇಂದ್ರಗಳಲ್ಲಿ ನಡೆಯಲಿದೆ ಎಂದು ತಿಳಿಸಿದರು. ಈ ಸಂದರ್ಭ ಸಂಸ್ಥೆಯ ವ್ಯವಸ್ಥಾಪಕ ದೀಪಕ್, ಸಹಾಯಕ ನಿರ್ದೇಶಕ ಬಾಲಕೃಷ್ಣ ಇದ್ದರು.