

ಮೈಸೂರು: ಆಕರ್ಷಣೆ, ಅನುಕರಣೆ, ಆಸಕ್ತಿ, ಆಹಾರದ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಬೆಂಗಳೂರಿನ ಆಯುರ್ವೇದ ತಜ್ಞ ಡಾ.ಅಬ್ದುಲ್ ಖಾದರ್ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ನಗರದ ವಾಲ್ಮೀಕಿ ರಸ್ತೆಯ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಬುಧವಾರ ಕನ್ನಡ ವಿಭಾಗವು ಐಕ್ಯುಎಸಿ ಮತ್ತು ಜನಪರ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ- 50ರ ಕರ್ನಾಟಕ ಸಂಭ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿ, ನಾವೆಲ್ಲಾ ಇಂಗ್ಲಿಷ್‌ಗೆ ಮಾರು ಹೋಗಿದ್ದೇವೆ. ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಣೆ ಮಾಡುತ್ತಿದ್ದೇವೆ. ಅದರಿಂದ ಹೊರಬರಲು ಆಗುತ್ತಿಲ್ಲ ಎಂದು ವಿಷಾದಿಸಿದರು.
ಇಂಗ್ಲಿಷ್ ಬಗ್ಗೆ ಆಕರ್ಷಣೆ ಇರುವುದರಿಂದ ಕನ್ನಡದಲ್ಲಿ ಮಾತನಾಡಿದರೆ ಕೀಳರಿಮೆ ಎಂದು ಭಾವಿಸುತ್ತೇವೆ. ಇದು ಕನ್ನಡ ಕುಗ್ಗಲು ಕಾರಣವಾಗಿದೆ. ಇದರ ಬದಲು ಪ್ರೀತಿಯಿಂದ ಕನ್ನಡ ಬಳಸಿ ಹಾಗೂ ಬೆಳೆಸಿ ಎಂದು ಅವರು ಕರೆ ನೀಡಿದರು.
ಇವತ್ತು ಕನ್ನಡ ಹಲವಾರು ಮಂದಿಯನ್ನು ಅಕ್ಕ ಸೇರಿದಂತೆ ವಿದೇಶಗಳಲ್ಲಿ ನಡೆಯುವ ವಿವಿಧ ಸಮ್ಮೇಳನಗಳಲ್ಲಿ ಭಾಗವಹಿಸುವ ಶಕ್ತಿ ನೀಡಿದೆ. ಆದ್ದರಿಂದ ಕನ್ನಡವನ್ನು ಯಾರೂ ನಿರ್ಲಕ್ಷ್ಯ ಮಾಡಬೇಡಿ ಎಂದು ಅವರು ಮನವಿ ಮಾಡಿದರು.
ಸಕಾರಾತ್ಮಕವಾದುದನ್ನು ಮಾತ್ರ ಅನುಕರಣೆ ಮಾಡಬೇಕು. ಸಾಮಾಜಿಕ ಕಳಕಳಿ ಹೊಂದಿರಬೇಕು. ಓದು, ಉದ್ಯೋಗದ ಬಗ್ಗೆ ಆಸಕ್ತಿ ಇರಬೇಕು. ರಾಮಾಯಣ, ಮಹಾಭಾರತ ಸೇರಿದಂತೆ ದಾರ್ಶನಿಕರು, ಕವಿಗಳು ಹೇಳಿರುವ ವಿಚಾರಗಳನ್ನು ಅರ್ಥ ಮಾಡಿಕೊಳ್ಳಬೇಕು. ಪುಸ್ತಕ ಹಾಗೂ ಪತ್ರಿಕೆಗಳನ್ನು ಓದಬೇಕು ಎಂದರು.
ನಮ್ಮ ಸಾಂಸ್ಕೃತಿಕ ಹಾಗೂ ಸಂಸ್ಕಾರದ ಪರಿಸರದಿಂದ ಆರೋಗ್ಯ ನಿರ್ಧಾರವಾಗುತ್ತದೆ. ಜಂಕ್ ಫುಡ್‌ನಿಂದ ದೂರವಿರಿ. ಸದಾ ತಾಳ್ಯೆಯಿಂದ ಇದ್ದು, ಮಾನಸಿಕ ಸಮತೋಲನ ಕಾಪಾಡಿಕೊಳ್ಳಿ. ಆತ್ಮಹತ್ಯೆಯಂಥಯ ನಿರ್ಧಾರಗಳಿಂದ ದೂರವಿರಬೇಕು ಎಂದು ಅವರು ಸಲಹೆ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಕನ್ನಡ ಅನ್ನದ ಭಾಷೆಯಾಗಬೇಕು. ಶಾಸ್ತ್ರೀಯ ಸ್ಥಾನಮಾನದ ಸದುಪಯೋಗ ಆಗಬೇಕು. ಕೇಂದ್ರದನಿಂದ ಹೆಚ್ಚಿನ ಅನುದಾನ ಪಡೆದುಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಅಹಲ್ಯಾಬಾಯಿ ಹೋಳ್ಕರ್ ಪತ್ತಿನ ಮಹಿಳಾ ಸಹಕಾರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷೆ ಕೆ.ಆರ್. ಪ್ರಭಾವತಿ ಮಾತನಾಡಿ, ರಾಜ್ಯದಲ್ಲಿರುವ ಅಂತಾರಾಷ್ಟ್ರೀಯ ಶಾಲೆಗಳು ಸೇರಿದಂತೆ ಎಲ್ಲೆಡೆ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಸಬೇಕು. ಕನ್ನಡಿಗರಿಗೆ ಉದ್ಯೋಗ ಸಿಗುವಂತೆ ಸರ್ಕಾರ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಂಶುಪಾಲೆ ಡಾ.ನಳಿನಿ ಮಾತನಾಡಿ, ಮಕ್ಕಳಿಗೆ ಮನೆಯಿಂದಲೇ ಕನ್ನಡ ಕಲಿಸಬೇಕು. ಅವಶ್ಯಕತೆ ಇರುವ ಕಡೆಯಲ್ಲಿ ಕನ್ನಡವನ್ನೇ ಬಳಸಬೇಕು. ಕನ್ನಡಿಗರು ಇನ್ನೊಬ್ಬರು ಮುಂದೆ ಕನ್ನಡ ಉಳಿಸಿ ಎಂದು ಕೆಚಾಚುವ ಪರಿಸ್ಥಿತಿ ಬರಬಾರದು ಎಂದರು.
ಬೆಂಗಳೂರಿನ ಆರಾಧ್ಯ ಲಲಿತಕಲಾ ಅಕಾಡೆಮಿಯ ಅಧ್ಯಕ್ಷೆ ಹಾಗೂ ಅಂತಾರಾಷ್ಟ್ರೀಯ ನೃತ್ಯಗಾರ್ತಿ ಕೆ. ಉಮಾ ಮಹೇಶ್ವರಿ ನೃತ್ಯ ಪ್ರದರ್ಶನ ನೀಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಇ. ಗೋವಿಂದೇಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು. ಐಕ್ಯುಐಸಿ ಸಂಚಾಲಕ ಡಾ.ವಿ.ಮಂಜುನಾಥ್ ಇದ್ದರು.