ಕಣ್ಮನ ಸೆಳೆದ ಆರ್‌ಎಸ್‌ಎಸ್ ಪಥ ಸಂಚಲನ

22 vikram 10A
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಜಯ ದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಭಾನುವಾರ ಸಂಜೆ ನಗರದಲ್ಲಿ ಹಮ್ಮಿಕೊಂಡಿದ್ದ ಪಥ ಸಂಚಲನ ಕಣ್ಮನ ಸೆಳೆಯಿತು.
ಗಣ ವೇಷಧಾರಿಗಳು ಶಿಸ್ತಿನ ಸಿಪಾಯಿಗಳಂತೆ ಘೋಷ ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರೆ, ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರು ಕುತೂಹಲದಿಂದ ಸಂಚಲನ ವೀಕ್ಷಿಸಿದರು. ಸಂಚಲನ ಅಂಗವಾಗಿ ನಗರದ ಪ್ರಮುಖ ಬೀದಿಗಳನ್ನು ರಂಗೋಲಿ, ಪುಷ್ಪಗಳಿಂದ ಅಲಂಕರಿಸಲಾಗಿತ್ತು.
ಸಂಚಲನದಲ್ಲಿದ್ದ ಭಗವಾ ಧ್ವಜ ಹಾಗೂ ಸಂಘದ ಸಂಸ್ಥಾಪಕರಾದ ಡಾಕ್ಟರಜೀ, ಗುರೂಜಿ ಭಾವಚಿತ್ರಕ್ಕೆ ಜನರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಇದೇ ಮೊದಲ ಬಾರಿಗೆ ಮಾರ್ಗದಲ್ಲಿ ಪಥ ಸಂಚಲ ನಡೆದಿದ್ದು ವಿಶೇಷವಾಗಿತ್ತು.
ಒಂದು ತಂಡ ಭಾರತ ಹೈಸ್ಕೂಲ್ ಮೈದಾನ ಮೂಲಕ ರೀಗಲ್ ವೃತ್ತ, ಸೂಪರ್ ಮಾರ್ಕೆಟ್, ಗಾಂಧಿಚೌಕ, ಹೆಬ್ಬಳ್ಳಿ ಅಗಸಿ, ಮಂಗಳವಾರಪೇಟೆ, ಕಾಮನಕಟ್ಟಿ, ಕೆಸಿಸಿ ಬ್ಯಾಂಕ್ ಮೂಲಕ ಭಾರತ್ ಹೈಸ್ಕೂಲ್ ತಲುಪಿತು. ಇನ್ನೊಂಡು ತಂಡ ಭಾರತ ಹೈಸ್ಕೂಲ್‌ನಿಂದ ರೀಗಲ್ ವೃತ್ತ, ಮಹಾರಾಣಾ ಪ್ರತಾಪ ವೃತ್ತ, ಆಝಾದ್ ಪಾರ್ಕ್, ಜುಬಿಲಿ ವೃತ್ತ, ಹಳೇ ಬಸ್ ನಿಲ್ದಾಣ, ಭೂಸಪ್ಪ ಚೌಕ್, ಕೆಸಿಸಿ ಬ್ಯಾಂಕ್ ಮೂಲಕ ಭಾರತ್ ಹೈಸ್ಕೂಲ್ ತಲಪಿತು. ಎರಡೂ ಸಂಚಲನ ಕೆಸಿಸಿ ಬ್ಯಾಂಕ್ ವೃತ್ತದಲ್ಲಿ ಸಂಗಮವಾಗಿದ್ದು ಅತ್ಯಂತ ಆಕರ್ಷಣೀಯವಾಗಿತ್ತು.
ನಂತರ ಏರ್ಪಡಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಪ್ರಾಂತ ಶಾರೀರಿಕ ಪ್ರಮುಖ ನಾಗೇಶ ಚೆನ್ನಾರೆಡ್ಡಿ ಮಾತನಾಡಿ, ಹಿಂದುತ್ವ, ಧರ್ಮ, ಪರಂಪರೆ ಉಳಿವು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಧ್ಯೇಯ. ಸದೃಢ ದೇಶ ಕಟ್ಟಲು ಯುವಜನ ತಯಾರಿಸುವ ಕೆಲಸ ಸಂಘ ಮಾಡುತ್ತಿದೆ. ಸಂಘವು ಹಿಂದುತ್ವದ ಮೌಲ್ಯಗಳ ಆಧಾರದ ಮೇಲೆ ಜೀವನ ನಡೆಸಲು ದೇಶದ ಕೋಟ್ಯಂತರ ಯುವ ಜನಾಂಗದಲ್ಲಿ ಆತ್ಮಜ್ಞಾನ ಮೂಡಿಸುತ್ತಿದೆ ಎಂದರು.
ಸಮರ್ಪಣಾ ಭಾವದ ಮೌಲ್ಯಯುತ ವ್ಯಕ್ತಿಗಳ ನಿರ್ಮಾಣ, ದೇಶ-ಸಮಾಜಕ್ಕೆ ದುಡಿಯುವ ವ್ಯಕ್ತಿಗಳ ನಿರ್ಮಾಣ, ವ್ಯಕ್ತಿಗಳಲ್ಲಿ ಪರಿವರ್ತನೆ ತರುವುದು, ಹಿಂದು ಸಮಾಜದಲ್ಲಿ ಏಕಾತ್ಮ ಭಾವನೆ ಮೂಡಿಸುವುದು ಸಂಘದ ಉದ್ದೇಶ. ವ್ಯಕ್ತಿಯು ಸ್ವಯಂ ಕೇಂದ್ರೀತ ಜೀವನದಿಂದ ಹೊರಬಂದು, ಸಮಾಜ ಕೇಂದ್ರಿತ ಜೀವನ ನಡೆಸುವತ್ತ ಸಂಘ ಪ್ರೇರೆಪಿಸುತ್ತಿದೆ. ಈ ನಿಟ್ಟಿನಲ್ಲಿ ಸರ್ವರು ಸಾಗಬೇಕು ಎಂದರು.
ಹಿಂದೂ ಸಂಸ್ಕೃತಿಯಲ್ಲಿ ಹಬ್ಬ-ಹರಿದಿನ ಕುಟುಂಬದ ಏಕತ್ವ, ವ್ಯಕ್ತಿಯ ವ್ಯಕ್ತಿತ್ವ ಅರಳಿಸುವ ಪದ್ಧತಿಗಳು ಅಲ್ಲದೆ, ಮನುಕುಲದ ಅಭಿವೃದ್ಧಿಗೆ ನೀತಿ ಪಾಠವನ್ನೂ ಕಲಿಸುತ್ತವೆ. ರಾವಣನ ಸಂಹರಿಸುವ ಮೂಲಕ ಅಧರ್ಮದ ಮೇಲೆ ಧರ್ಮದ ವಿಜಯವೇ ವಿಜಯದಶಮಿ ಸಂಕೇತ ಎಂದರು.
ಅತಿಥಿಯಾಗಿ ಪಾಲ್ಗೊಂಡಿದ್ದ ವೈದ್ಯ ಡಾ.ಪ್ರೀತಂ ಹುರಕಡ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸ್ವಯಂಸೇವಕರು ಘೋಷ್, ದಂಡ, ಸಮತಾ, ಆಟ, ದಂಡ ವ್ಯಾಯಾಮ, ವ್ಯಾಯಾಮ ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net