ಗಮನ ಸೆಳೆದ ‘ಮೈಗ್ರೀನ್-2024’ ವಸ್ತು ಪ್ರದರ್ಶನ

mysore
Published on

ಮೈಸೂರು: ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಭಾನುವಾರ ಆಯೋಜಿಸಿದ್ದ 8ನೇ ಆವೃತ್ತಿಯಾದ ‘ಮೈಗ್ರೀನ್-2024’ ಪರಿಸರ ಸ್ನೇಹಿ ಉತ್ಪನ್ನಗಳ ವಸ್ತು ಪ್ರದರ್ಶನ ಗಮನ ಸೆಳೆಯಿತು.


ಬಿಲ್ಡರ್ಸ್‌ ಅಸೋಸಿಯೇಷನ್ ಆಫ್ ಇಂಡಿಯಾದ ಮೈಸೂರು ಶಾಖೆ ಮತ್ತು ಮೈಸೂರು ಬಿಲ್ಡರ್ಸ್‌ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಈ ಪ್ರದರ್ಶನವನ್ನು ವಿಶ್ವ ಪರಿಸರ ಮಾಹೆಯ ಅಂಗವಾಗಿ ಆಯೋಜಿಸಲಾಗಿತ್ತು.


ಪರಿಸರ ಸ್ನೇಹಿ ಕಟ್ಟಡ ನಿರ್ಮಾಣ ಪದಾರ್ಥಗಳು, ನವೀಕರಿಸಬಹುದಾದ ಉತ್ಪನ್ನಗಳು, ತಂತ್ರಜ್ಞಾನ, ಸಾವಯವ ಆಹಾರ ಪದಾರ್ಥಗಳು ಇನ್ನಿತರ ಪರಿಸರಕ್ಕೆ ಪೂರಕವಾದ ಜೀವನ ಶೈಲಿ ಅನುಕರಣೀಯ ಉತ್ಪನ್ನಗಳು ಇಲ್ಲಿದ್ದವು.


ಸಾವಯವ ಗೊಬ್ಬರ ತಯಾರಿಕೆ, ರಾಸಾಯನಿಕ ರಹಿತ ವಸ್ತುಗಳು, ಶೌಚಗೃಹ ಶುದ್ಧೀಕರಣ ಪದಾರ್ಥಗಳು, ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು, ಕೆಲ ಉತ್ಸಾಹಿತ ವ್ಯಕ್ತಿಗಳಿಂದ ತಯಾರಿಸಿರುವ ಪರಿಸರ ಸ್ನೇಹಿ ತಂತ್ರಜ್ಞಾನ, ಆವಿಷ್ಕಾರಗಳು ಆಕರ್ಷಿಸಿದವು. ಬೆಳಗ್ಗೆ 10ರಿಂದ ರಾತ್ರಿ 9ರ ವರೆಗೆ ನಡೆದ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿತ್ತು.


ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಪರಿಸರ ಸ್ನೇಹಿ ಜೀವನ ಶೈಲಿಯ ಸಲಹೆಗಾರ ರಮೇಶ್ ಕಿಕ್ಕೇರಿ, ಪರಿಸರಕ್ಕೆ ಪೂರಕವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಬೇಕು. ಇದರಿಂದ ಪರಿಸರದಲ್ಲಿ ಸುಸ್ಥಿರತೆ ಮತ್ತು ಸಮತೋಲನ ಕಾಯ್ದುಕೊಳ್ಳಲು ಸಾಧ್ಯ ಎಂದರು.


ಕಟ್ಟಡಗಳನ್ನು ನವೀಕರಿಸಬಹುದಾದ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದನೆ ಮಾಡುವ ಚಿಕ್ಕ ಘಟಕವಾಗಿ ಪರಿವರ್ತನೆ ಮಾಡಬೇಕಿದೆ. ಜಲ, ಉಷ್ಣ, ಅಣು ವಿದ್ಯುತ್ ದುಬಾರಿಯಾಗಿದೆ. ಪರಿಸರಕ್ಕೆ ಹಾನಿ ಉಂಟು ಮಾಡುತ್ತದೆ. ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮೇಲೆ ಅಧಿಕ ಒತ್ತಡವನ್ನು ಹಾಕುತ್ತಿದೆ. ಆದ್ದರಿಂದ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.


ಬಿಲ್ಡರ್ಸ್‌ ಅಸೋಸಿಯೇಷನ್‌ನ ಜಿಲ್ಲಾಧ್ಯಕ್ಷ ಎ.ಎಸ್.ಯೋಗನರಸಿಂಹ, ಪದಾಧಿಕಾರಿಗಳಾದ ವಿ.ಶ್ರೀನಾಥ್, ಎಸ್.ಶಶಿರಾಜ್, ಕೆ.ಆರ್.ಪ್ರಭಾಕರ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net