

ಕನಕಗಿರಿ: ಇಲ್ಲಿನ 13ನೇ ವಾರ್ಡಿನಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪ್ರತಿಷ್ಠಾಪಿಸಲಾಗಿರುವ ರೈಲು ಹಳಿ ಮೇಲೆ ಸಾಗುವ ರೈತ ಗಣಪ ಚಿಣ್ಣರ ಮನರಂಜಿಸುತ್ತಿದ್ದಾನೆ.
ಇದನ್ನೂ ಓದಿ:ಚನ್ನಗಿರಿಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ
ಕಳೆದ ಒಂಬತ್ತು ವರ್ಷಗಳಿಂದ ಪಟ್ಟಣದ ಸಿದ್ಧಿ ವಿನಾಯಕ ಗಜಾನನ ಸಮಿತಿ ಗಣೇಶನನ್ನು ಪ್ರತಿಷ್ಠಾಪಿಸುತ್ತಿದ್ದು, ಈ ಬಾರಿಯ ಹಬ್ಬದಲ್ಲಿ ರೈತ ಎತ್ತುಗಳನ್ನು ಹೊಡೆದುಕೊಂಡು ವೇದಿಕೆಯಲ್ಲಿನ ಭತ್ತದ ಗದ್ದೆಯನ್ನು ಸುತ್ತುವರೆಯುವ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ.
ಇದನ್ನು ಯುಟ್ಯೂಬ್‌ನಲ್ಲಿ ನೋಡಿ ನಿರ್ಮಾಣ ಮಾಡಲಾಗಿದೆ. ಮಕ್ಕಳ ಮನರಂಜನೆ ಉದ್ದೇಶದಿಂದ ಮೋಟಾರ್ ಬಳಸಿಕೊಂಡು ಹಳಿ ನಿರ್ಮಿಸಿ ಅದರ ಮೇಲೆ ಹಲಗೆಗಳನ್ನು ಅಳವಡಿಸಿ ಮೇಲ್ಭಾಗದಲ್ಲಿ ಎತ್ತುಗಳನ್ನು ಹೊಡೆದುಕೊಂಡು ಕೃಷಿ ಚಟುವಟಿಕೆಗೆ ತೆರಳುತ್ತಿರುವ ರೈತ ಮಾದರಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ.
ಕಳೆದ ಒಂದೂವರೆ ತಿಂಗಳಿಂದ ಇದಕ್ಕಾಗಿ ಶ್ರಮಿಸಿದ್ದು, ಈ ಸಮಿತಿ ಶ್ರಮಕ್ಕೆ ನಿರೀಕ್ಷೆಗೂ ಮೀರಿ ಫಲ ಸಿಕ್ಕಿದೆ. ಮಕ್ಕಳು ನಾ ಮುಂದು ತಾ ಮುಂದು ಎಂದು ಸರತಿಯಲ್ಲಿ ಈ ರೈತ ಗಣೇಶನೊಂದಿಗೆ ಭತ್ತದ ಗದ್ದೆಯನ್ನು ಸುತ್ತುವರೆದು ಸಂಭ್ರಮಿಸುತ್ತಿದ್ದಾರೆ.
ಸಮಿತಿಯವರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತವಾಗಿದ್ದು, ಎಲ್ಲೆಡೆ ಇದೇ ಗಣೇಶನ ಚರ್ಚೆ ನಡೆಯುತ್ತಿದೆ. ರೈತ ಗಣೇಶನ ಪಕ್ಕಕ್ಕೆ ನಿಂತು ಸುತ್ತು ಹಾಕಲು ಓರ್ವರಿಗೆ 20 ರೂ. ನಿಗದಿ ಮಾಡಲಾಗಿದ್ದು, ಒಮ್ಮೆಗೆ 6-8 ಮಕ್ಕಳು ಗಣೇಶನೊಂದಿಗೆ ಸುತ್ತುವರೆಯುತ್ತಿದ್ದಾರೆ. ಇದನ್ನು ನೋಡಲು ಕಳೆದೆರಡು ದಿನಗಳಿಂದ ನೂರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಿದ್ದಾರೆ.