

ಸೋಮವಾರಪೇಟೆ: ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಹಾಜರಾತಿ ಪುಸ್ತಕವನ್ನು ಇಲಾಖೆ ಕಡ್ಡಾಯವಾಗಿ ನಿರ್ವಹಿಸಬೇಕು ಎಂದು ಲೋಕಾಯುಕ್ತ ಡಿವೈಎಸ್‌ಪಿ ದಿನಕರಶೆಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಲೋಕಾಯುಕ್ತದ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಸಾರ್ವಜನಿಕರಿಂದ ದೂರು ಸ್ವೀಕಾರ ಮತ್ತು ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು.
ಹಲವು ಇಲಾಖೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಹೆಚ್ಚಿನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಆದರೆ ಇವರಿಗೆ ಹಾಜರಾತಿ ಪುಸ್ತಕದಲ್ಲಿ ಹಾಜರಾತಿ ಪಡೆಯುತ್ತಿಲ್ಲ. ಕಡ್ಡಾಯವಾಗಿ ಹಾಜರಾತಿ ಪುಸ್ತಕವನ್ನು ಎಲ್ಲ ಇಲಾಖೆಯವರು ನಿರ್ವಹಿಸಿಬೇಕು. ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲರೂ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಬೇಕು. ಇಲಾಖೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಹಾಜರಾತಿ ಪುಸ್ತಕವನ್ನು ನಿರ್ವಹಿಸದಿರುವುದು ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸರ್ಕಾರಿ ಕಚೇರಿಗಳಿಗೆ ಸಾಕಷ್ಟು ಜನರು ಮಾಹಿತಿ ಹಕ್ಕಿನಡಿಯಲ್ಲಿ ಮಾಹಿತಿ ಕೊಡುವಂತೆ ಮನವಿ ಮಾಡಿದರೂ, ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಇಲಾಖೆ ಅಧಿಕಾರಿಗಳು ಬೇಜಬ್ದಾರಿಯಿಂದ ವರ್ತಿಸದೆ, ಸರಿಯಾದ ಮಾಹಿತಿಯನ್ನು ಎಲ್ಲರೂ ನೀಡಬೇಕು ಎಂದು ತಿಳಿಸಿದರು.
ತಾಲೂಕಿನ ಹೊಸಳ್ಳಿ, ಯಲಕನೂರು ಗ್ರಾಮಗಳ ಹಲವೆಡೆ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಅರಣ್ಯ ಮತ್ತು ಕಾಡುಪ್ರಾಣಿಗಳಿಗೆ ಸಮಸ್ಯೆಯಾಗುತ್ತಿದೆ. 2023ರಲ್ಲಿ ಅರಣ್ಯ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿ.ಟಿ.ಮದನ್ ದೂರು ನೀಡಿದರು. ಜತೆಗೆ ತಾಲೂಕಿನ ನಗರೂರು ಗ್ರಾಮದ ಸರ್ಕಾರಿ ಕೆರೆ ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಸಂಬಂಧಿಸಿ ದಾಖಲೆಯೊಂದಿಗೆ ತಹಸೀಲ್ದಾರರಿಗೆ ದೂರು ನೀಡಲಾಗಿದೆ. ಇಲ್ಲಿಯವರೆಗೆ ಒತ್ತುವರಿ ತೆರವುಗೊಳಿಸಿ, ಒತ್ತುವರಿದಾರರ ಮೇಲೆ ಕ್ರಮ ತೆಗೆದುಕೊಳ್ಳಲು ಕಂದಾಯ ಇಲಾಖೆ ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೆ ಕ್ರಮಕ್ಕೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಕೋರಿದರು.
ತಾಲೂಕಿನ ಅಂಜನಗೇರಿ ಬೆಟ್ಟಗೇರಿ ಗ್ರಾಮದಲ್ಲಿ ದೇವರ ಕಾಡನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡು ಮರಗಳನ್ನು ಕಡಿದು ಕಾಫಿ ತೋಟವನ್ನಾಗಿ ಪರಿವರ್ತಿಸಿ, ಅರಣ್ಯವನ್ನು ನಾಶ ಮಾಡಿದ್ದಾರೆ. ಇವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಕೊಡಗು ಸೇವಾ ಕೇಂದ್ರದ ಸಂಚಾಲಕ ಟಿ.ಎಂ. ಸೋಮಯ್ಯ ದೂರು ನೀಡಿದರು.
ಕೂಡಲೇ ತಹಸೀಲ್ದಾರ್ ಕೃಷ್ಣಮೂರ್ತಿ ಮತ್ತು ಎಡಿಎಲ್‌ಆರ್ ಪರಮೇಶ್ ಅವರಿಗೆ 2023 ರಿಂದಲೂ ದೂರು ನೀಡಿದ ಅರ್ಜಿಗಳು ಬಾಕಿ ಉಳಿದಿವೆ. ಕೂಡಲೇ ಸ್ಥಳ ಪರಿಸೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಡಿವೈಎಸ್‌ಪಿ ಹೇಳಿದರು. ಸಭೆಯಲ್ಲಿ ಇನ್‌ಸ್ಪೆಕ್ಟರ್ ಲೋಕೇಶ್, ವೀಣಾ, ತಾಲೂಕು ಪಂಚಾಯಿತಿ ಇಒ ಪರಮೇಶ ಕುಮಾರ್ ಹಾಗೂ ಮತ್ತಿತರರ ಅಧಿಕಾರಿಗಳಿದ್ದರು.