

ಅರಕೇರಾ: ನರೇಗಾ ಯೋಜನೆಯಡಿ ಹಾಜರಾತಿ ಪಡೆಯುತ್ತಿಲ್ಲ ಎಂದು ಆರೋಪಿಸಿ 500ಕ್ಕೂ ಹೆಚ್ಚು ಕೂಲಿಕಾರರು ತಾಲೂಕಿನ ಬಿ.ಗಣೇಕಲ್ ಗ್ರಾಪಂ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಎನ್‌ಎಂಎಂಎಸ್ ಹಾಜರಾತಿ ಕಡ್ಡಾಯ
ರೈತ ಸಂಘದ ತಾಲೂಕು ಅಧ್ಯಕ್ಷ ಹಾಜಿ ಮಸ್ತನ್ ಮಾತನಾಡಿ, ಬಿ.ಗಣೇಕಲ್ ಗ್ರಾಪಂನಲ್ಲಿ ಖಾತ್ರಿ ಯೋಜನೆಯಡಿ ಸಮುದಾಯ ಆಧಾರಿತ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ, ಕೂಲಿಕಾರರ ಹಾಜರಾತಿ ಪಡೆಯಲು ಗ್ರಾಪಂ ಅಧಿಕಾರಿ, ಸಿಬ್ಬಂದಿ ಹಿಂದೇಟು ಹಾಕಿ ಬಡವರ ಹಣ ಕೊಳ್ಳೆ ಹೊಡೆಯಲು ಹುನ್ನಾರ ನಡೆಸಿದ್ದಾರೆ.
ಕಳೆದೆರಡು ದಿನಗಳಿಂದ ಕಾಮಗಾರಿ ಸ್ಥಳದಲ್ಲಿ ಕಾದು ಕುಳಿತರೂ ಹಾಜರಾತಿ ಹಾಕುತ್ತಿಲ್ಲ. ಖಾತ್ರಿ ಯೋಜನೆ ನಂಬಿಕೊಂಡವರ ಸ್ಥಿತಿ ಹೇಳತೀರದಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನರೇಗಾ ಯೋಜನೆ ಹಳ್ಳ ಹಿಡಿದಿದ್ದು, ಬಡವರಿಗೆ ಶಾಪವಾಗಿ ಪರಿಣಮಿಸಿದೆ.
ನರೇಗಾ ಕಾಮಗಾರಿಗಳಲ್ಲಿ ಪಾರದರ್ಶಕತೆ ತರಲು ಜಾರಿಗೊಳಿಸಿರುವ ಎನ್‌ಎಂಎಂಎಸ್ ಮೊಬೈಲ್ ಆ್ಯಪ್ ಸಮರ್ಪಕವಾಗಿ ಕಾರ್ಯಗತವಾಗುತ್ತಿಲ್ಲ. ಇದರಿಂದ ಕೂಲಿ ಕಾರ್ಮಿಕರ ಹಾಜರಾತಿಗೆ ಸಮಸ್ಯೆಯಾಗಿದೆ. ಬೇಸಿಗೆಯಲ್ಲಿ ಖಾತ್ರಿ ಕೆಲಸ ಬೆಳಗ್ಗೆ 8 ರಿಂದ ಮಧ್ಯಾಹ್ನ 12ಗಂಟೆಗೆ ಬದಲಿಸಲಾಗಿದೆ. ವಿಪರ್ಯಾಸವೆಂದರೆ ಇಲ್ಲಿ 11 ಗಂಟೆಯಾದರೂ ಹಾಜರಾತಿ ಪಡೆಯಲು ನಿಯೋಜಿತ ಸಿಬ್ಬಂದಿ ಸಮಯಪಾಲನೆ ಮರೆತಿದ್ದು, ಬಡ ಕೂಲಿಕಾರರನ್ನು ಮತ್ತಷ್ಟು ಕೆರಳಿಸಿದೆ ಎಂದು ದೂರಿದರು.
ಕೆಲಸದ ಸ್ಥಳದಲ್ಲಿ ಕುಡಿವ ನೀರು, ನೆರಳಿನ ವ್ಯವಸ್ಥೆ, ಪ್ರಥಮ ಚಿಕಿತ್ಸೆ ಪೆಟ್ಟಿಗೆ ನೀಡಬೇಕು. ಆದರೆ, ಇದ್ಯಾವ ಸೌಲಭ್ಯಗಳು ಗ್ರಾಪಂ ಒದಗಿಸುತ್ತಿಲ್ಲ. ಕುಡಿವ ನೀರು, ಚರಂಡಿ ಸ್ವಚ್ಛತೆ, ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ದೂರವಾಣಿ ಕರೆಗೆ ಸಿಗುವುದಿಲ್ಲ. ವೈಯಕ್ತಿಕ ನೆಪ ಹೇಳಿ ಪಂಚಾಯಿತಿಗೆ ಬರುವುದಿಲ್ಲ ಎಂದು ಆರೋಪಿಸಿದರು. ಪ್ರಮುಖರಾದ ಪ್ರಭುಸ್ವಾಮಿ, ಹನುಮಂತ್ರಾಯ ಮಕಾಶಿ ದೊರೆ, ಶಿವರಾಜ ಬಾಬೆ, ಶಿವಪ್ಪ ಗೊರ್ಲಿ ಇತರರಿದ್ದರು.