ನರೇಗಾ ಕಾಮಗಾರಿ ಹಾಜರಾತಿ ಕಡ್ಡಾಯ

NARAGUND
Published on

ನರಗುಂದ: ತಾಲೂಕಿನ ಬೆನಕನಕೊಪ್ಪ ಗ್ರಾಮ ಪಂಚಾಯತಿಯಲ್ಲಿ ನರೇಗಾ ಕಾಮಗಾರಿಗಳನ್ನು ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಎನ್‌ಎಂಎಂಎಸ್ ಹಾಜರಾತಿ ನಿರ್ವಹಣೆ ಕುರಿತು ಗ್ರಾಪಂ ಅಧ್ಯಕ್ಷ, ಸದಸ್ಯರು, ಕಾಯಕ ಬಂಧುಗಳು ಹಾಗೂ ಗ್ರಾಪಂ ಸಿಬ್ಬಂದಿಯ ಸಭೆ ಮಂಗಳವಾರ ಜರುಗಿತು.

ನರೇಗಾ ಯೋಜನೆ ಸಹಾಯಕ ನಿರ್ದೇಶಕ ಸಂತೋಷಕುಮಾರ ಪಾಟೀಲ ಮಾತನಾಡಿ, ಕೂಲಿಕಾರರು ಕೆಲಸಕ್ಕೆ ಬಂದರೆ ಕಡ್ಡಾಯವಾಗಿ ಕಾಯಕ ಬಂಧುಗಳು ಎನ್‌ಎಂಎಂಎಸ್ ಹಾಜರಿ ತೆಗೆದುಕೊಳ್ಳಬೇಕು. ಮೊದಲನೇ ಹಾಜರಿಯಲ್ಲಿದ್ದವರು ಎರಡನೇ ಹಾಜರಾತಿಯಲ್ಲಿಯೂ ಅವರೇ ಕೆಲಸದಲ್ಲಿ ತೊಡಗಿರಬೇಕು. ಒಂದು ವೇಳೆ ಬದಲಾವಣೆ ಮಾಡಿದ್ದರೆ ಅಂಥವರಿಗೆ ಆ ದಿನದ ಹಾಜರಾತಿ ತಪ್ಪಾಗಿದೆ ಎಂದು ಪರಿಗಣಿಸಿ ಕೂಲಿಹಣ ಪಾವತಿಸುವುದಿಲ್ಲ ಎಂದರು.

ಎನ್‌ಎಂಎಂಎಸ್ ಹಾಜರಾತಿಯನ್ನು ಪಂಚಾಯಿತಿ ಮಟ್ಟದಲ್ಲಿ ಪಿಡಿಒ ಪರಿಶೀಲಿಸುತ್ತಾರೆ. ನಂತರ ತಾಲೂಕು, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಪರಿಶೀಲನೆ ಮಾಡಲಾಗುತ್ತದೆ. ಆದ್ದರಿಂದ ಕೆಲಸ ಪ್ರಾರಂಭಿಸುವಾಗ ಕೂಲಿಕಾರರ ಮೊದಲನೇ ಮತ್ತು ಎರಡನೇ ಹಾಜರಾತಿಯನ್ನು ಸರಿಯಾದ ಸಮಯಕ್ಕೆ ಹಾಕಿಸಬೇಕು. ಹಾಜರಾತಿ ಪರಿಶೀಲನೆ ವೇಳೆ ಸಣ್ಣ ತಪ್ಪುಗಳಾಗಿದ್ದರೂ ಹತ್ತು ಜನರಿರುವ ಎನ್‌ಎಂಆರ್ ಜೀರೋ ಆಗುತ್ತದೆ. ಒಬ್ಬರಿಗೂ ಹಣ ಜಮೆ ಆಗುವುದಿಲ್ಲ. ಆದ್ದರಿಂದ ಯಾವುದೇ ಸಮಸ್ಯೆಗಳಾಗದಂತೆ ಅಧಿಕಾರಿ, ಪ್ರತಿನಿಧಿಗಳು, ಕೂಲಿಕಾರ್ಮಿಕರು ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ತಾಂತ್ರಿಕ ಸಂಯೋಜಕ ಹನುಮಂತ ಡಂಬಳ, ಐಇಸಿ ಸಂಯೋಜಕ ಮಂಜುನಾಥ ಹಳ್ಳದ, ತಾಂತ್ರಿಕ ಸಹಾಯಕ ಲಿಂಗರಾಜ ಮುದಿಗೌಡ್ರ, ಪಿಡಿಒ ಎಲ್.ಬಿ. ಕಲ್ಲಾಪೂರ, ಗ್ರಾಪಂ ಅಧ್ಯಕ್ಷರು, ಸದಸ್ಯರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net