ಮಸ್ಟರಿಂಗ್ ಕೇಂದ್ರಗಳಲ್ಲಿ ಹಾಜರಾತಿ ಹೆಚ್ಚಳ: ಬಿಎಸ್‌ಡಬ್ಲ್ಯುಎಂಎಲ್ ಸಿಇಒ ಕರಿಗೌಡ

mustering kendra
Published on

ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿಯನ್ನು ಇನ್ನಷ್ಟು ಸಮರ್ಪಕವಾಗಿ ಕೈಗೊಳ್ಳುವ ಹಿನ್ನೆಲೆಯಲ್ಲಿ, ಆಟೋ ಟಿಪ್ಪರ್‌ಗಳ ಹಾಜರಾತಿಯನ್ನು ಕರಾರುವಕ್ಕಾಗಿ ನಮೂದಿಸಿ ಅನುಷ್ಠಾನಿಸಲು ಟ್ರ್ಯಾಕ್ ಡ್ಯೂಟಿ ತಂತ್ರಾಂಶವನ್ನು ಬಿಎಸ್‌ಡಬ್ಲ್ಯುಎಂಎಲ್ ಅಭಿವೃದ್ಧಿಪಡಿಸಿದೆ. ಇದರ ಸಹಾಯದಿಂದ ಮಸ್ಟರಿಂಗ್ ಕೇಂದ್ರಗಳಲ್ಲಿ ಆಗುತ್ತಿದ್ದ ಹಾಜರಾತಿ ವಿಳಂಬವನ್ನು ಸರಿಪಡಿಸಲು ಸಾಧ್ಯವಾಗಿದೆ.

ಕಳೆದ ಹದಿನೈದು ಹಿಂದೆ ಆಟೋ ಟಿಪ್ಪರ್‌ಗಳ ಸ್ಕ್ಯಾನಿಂಗ್ ಸಮಯವನ್ನು ಬದಲಾಯಿಸಲಾಗಿದೆ. ಮೊದಲು ಬೆಳಗ್ಗೆ 6.30ಕ್ಕೆ ಇದ್ದ ಹಾಜರಾತಿ ಅವಧಿಯನ್ನು ಒಂದು ಗಂಟೆ ಮುಂಚೆ ಅಂದರೆ 5.30ರಿಂದ ಆರಂಭಿಸಲಾಗಿದೆ. ಇದರಿಂದ ಮಸ್ಟರಿಂಗ್ ಕೇಂದ್ರಗಳಲ್ಲಿ ಆಟೋ ಟಿಪ್ಪರ್‌ಗಳ ಹಾಜರಾತಿ ಶೇ.85ರಿಂದ ಶೇ.95ಕ್ಕೆ ಏರಿಕೆಯಾಗಿದೆ. ಜತೆಗೆ ಸಮಯಕ್ಕೆ ಸರಿಯಾಗಿ ಈ ಆಟೋ ಟಿಪ್ಪರ್‌ಗಳು ಕಸ ಸಂಗ್ರಹ ಮಾಡಿ ವಾಪಸ್ ಸಾಗಣೆ ಜಾಗಕ್ಕೆ ರವಾನಿಸಲು ಸಾಧ್ಯವಾಗಿದೆ. ಆಟೋ ಟಿಪ್ಪರ್‌ಗಳ ವಾಹನಗಳ ಸ್ಕ್ಯಾನಿಂಗ್ ಸಮಯ ಬದಲಾವಣೆಯಿಂದ ಉತ್ತಮ ಫಲಿತಾಂಶ ಬಂದಿದೆ ಎಂದು ನಿಗಮದ ಸಿಇಒ ಕರಿಗೌಡ ತಿಳಿಸಿದ್ದಾರೆ.

ಹಸಿ/ಒಣ ಕಸ ಪ್ರತ್ಯೇಕ ಸಂಗ್ರಹಕ್ಕೆ ಸೂಚನೆ:

ಪ್ರತಿನಿತ್ಯ ಮಸ್ಟರಿಂಗ್ ಕೇಂದ್ರಗಳಿಗೆ ಎಲ್ಲ ಅಧಿಕಾರಿಗಳು ಭೇಟಿ ನೀಡುತ್ತಿದ್ದು, ಮೇಲ್ಚಿಚಾರಣೆ ನಡೆಸಿದ್ದಾರೆ. ಇದರಿಂದ ಆಟೋ ಟಿಪ್ಪರ್‌ಗಳು ಹಾಗೂ ಪೌರಕಾರ್ಮಿಕರ ಹಾಜರಾತಿ ಏರಿಕೆ ಕಂಡಿದೆ. ನಗರದಲ್ಲಿ 200 ಮಸ್ಟರಿಂಗ್ ಕೇಂದ್ರಗಳಿದ್ದು, 28 ಎಜಿಎಂ, ಚೀಫ್​ ಮಾರ್ಷಲ್ ಸೇರಿ ಇತರ ಅಧಿಕಾರಿಗಳು ನಿತ್ಯ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಹಾಜರಾತಿಯನ್ನು ಪರಿಶೀಲಿಸುತ್ತಿದ್ದಾರೆ. ಜತೆಗೆ ಆಟೋ ಟಿಪ್ಪರ್‌ಗಳು ಮನೆ-ಮನೆಗೆ ಭೇಟಿ ನೀಡಿ ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಸೂಚನೆ ನೀಡಲಾಗಿದೆ. ಇದರಿಂದ ರಸ್ತೆ ಬದಿ ತ್ಯಾಜ್ಯ ಬಿಸಾಡುವ ಪ್ರಕರಣಗಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದ್ದು, ಸ್ವಚ್ಛತೆ ಕಾಪಾಡಲು ಸಹಕಾರಿಯಾಗಿದೆ ಎಂದು ಕರಿಗೌಡ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net