ಪರೀಕ್ಷೆ ಬರೆದು ತಂದೆ ಅಂತ್ಯಸಂಸ್ಕಾರದಲ್ಲಿ ಭಾಗಿ: ಚಿಂದಗಿರಿದೊಡ್ಡಿಯಲ್ಲಿ ಹೃದಯ ವಿದ್ರಾವಕ ಪ್ರಕರಣ

Attend the father funeral after taking the exam Mandya
Published on

ಮಂಡ್ಯ: ತಾಲೂಕಿನ ಚಿಂದಗಿರಿದೊಡ್ಡಿ ಗ್ರಾಮದಲ್ಲಿ ಬುಧವಾರ ತಂದೆಯ ಅಕಾಲಿಕ ಸಾವಿನ ನೋವಿನಲ್ಲೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ನಂತರ ಅಂತ್ಯಸಂಸ್ಕಾರದಲ್ಲಿ ಮಗ ಭಾಗಿಯಾಗಿದ್ದಾನೆ.

ಚಿಕ್ಕಮಂಡ್ಯ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಾಜಿ ಎಂಬ ವಿದ್ಯಾರ್ಥಿಯ ತಂದೆ ಮಹೇಶ್ ಮಂಗಳವಾರ(ಮಾ.25) ಸಂಜೆ ನಿಧನರಾದರು. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡಿದ್ದ ವಿದ್ಯಾರ್ಥಿ ತಂದೆ ಆಶ್ರಯದಲ್ಲಿ ಬೆಳೆಯುತ್ತಿದ್ದನು. ಆದರೆ ದುರಾದೃಷ್ಟವಶಾತ್ ಈಗ ತಂದೆಯೂ ಮೃತಪಟ್ಟಿದ್ದಾರೆ. ಈ ನಡುವೆ ಬುಧವಾರ(ಮಾ.26) ತಾಲೂಕಿನ ಕೊಮ್ಮೇರಹಳ್ಳಿ ಕೇಂದ್ರದಲ್ಲಿ ಆಂಗ್ಲ ಭಾಷೆಯ ಪರೀಕ್ಷೆ ಬರೆಯಬೇಕಿತ್ತು. ಒಂದೆಡೆ ತಂದೆಯ ಸಾವು, ಮತ್ತೊಂದೆಡೆ ಪರೀಕ್ಷೆ ಬರೆಯಬೇಕಾದ ಸ್ಥಿತಿಯಿಂದ ಬಾಲಾಜಿಗೆ ದಿಕ್ಕು ತೋಚದಂತಾಗಿತ್ತು.

ಮಾಹಿತಿ ತಿಳಿದು ಗ್ರಾಮಕ್ಕೆ ಆಗಮಿಸಿದ ಶಾಲೆಯ ಮುಖ್ಯಶಿಕ್ಷಕರಾದ ಎಚ್.ಎನ್.ದೇವರಾಜು, ಎಸ್‌ಡಿಎಂಸಿ ಅಧ್ಯಕ್ಷ ಸಿ.ಎಂ.ಮಹೇಶ್, ಶಿಕ್ಷಕರಾದ ಬಸವರಾಜು, ಅಣ್ಣೇಗೌಡ, ರವಿಶಂಕರ್ ಮತ್ತು ಸಹಪಾಠಿಗಳು ಬಾಲಾಜಿ ಮನೆಗೆ ತೆರಳಿ ಸಾಂತ್ವನ ಹೇಳಿದರು. ಮಾತ್ರವಲ್ಲದೆ ಪರೀಕ್ಷೆ ಬರೆಯುವಂತೆ ಆತ್ಮಸ್ಥೈರ್ಯ ತುಂಬಿದರು. ಅಂತೆಯೇ ಪರೀಕ್ಷೆ ಮುಗಿದ ನಂತರ ಅಂತ್ಯಸಂಸ್ಕಾರ ಮಾಡುವಂತೆ ಸಂಬಂಧಿಕರ ಮನವೊಲಿಸಲಾಯಿತು. ಅದರಂತೆ ಆಂಗ್ಲ ವಿಷಯ ಪರೀಕ್ಷೆ ಬರೆದು ನಂತರ ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net