ವಿಧಾನಸಭೆ ಚುನಾವಣೆಯಲ್ಲೂ ಮತಗಳ್ಳತನಕ್ಕೆ ಯತ್ನ - ವಿನಯ ಆರೋಪ

VINAYA KUMAR SORAKE
VINAYA KUMAR SORAKE
Published on

ರಾಯಚೂರು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬೆಂಗಳೂರು ಮೂಲದ ಚಿಲುಮೆ ಎನ್ನುವ ಸಂಸ್ಥೆ ಮತಗಳ್ಳತನಕ್ಕೆ ಯತ್ನ ಮಾಡಲಾಗಿತ್ತೇಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯ ಕುಮಾರ ಸೊರಕೆ ಆರೋಪಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ವರಿಷ್ಠ ರಾಹುಲ್ ಗಾಂಧಿ ಈಗಾಗಲೇ ಬೆಂಗಳೂರಿನ ಮಹಾದೇವಪುರ ಹಾಗೂ ಕಲಬುರಗಿಯ ಆಳಂದ ಕ್ಷೇತ್ರದಲ್ಲಿ ಮತಗಳ್ಳತನವಾಗಿರುವುದಕ್ಕೆ ದಾಖಲೆ ನೀಡಿ ಮಾಹಿತಿ ಹೊರತೆಗಿದ್ದಾರೆ. ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ 21 ಲಕ್ಷ ಮತಗಳ್ಳತನವಾಗಿದ್ದರೆ, ಕೇವಲ ಆರು ತಿಂಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ 41 ಲಕ್ಷ ಮತಗಳನ್ನು ಅಕ್ರಮವಾಗಿ ಸೇರಿಸಲಾಗಿದೆ. ಇಂತಹ ಕೃತ್ಯಗಳ ಜಾಗೃತಿ ಹಾಗೂ ರಾಜ್ಯ ಸರ್ಕಾರದ ಸಾಧನೆಗಳ ಕುರಿತು ಜನರಿಗೆ ಮನವರಿಕೆ ಮಾಡಲು ಪ್ರಚಾರ ಸಮಿತಿ ವರ್ಷಪೂರ್ತಿ ಕೆಲಸ ಮಾಡಲು ಮುಂದಾಗಿದೆ ಎಂದರು.

ಪ್ರಚಾರ ಸಮಿತಿಯಿಂದ ಪ್ರತಿ ಗ್ರಾಮ ಪಂಚಾಯತಿ ಮಟ್ಟದ ಬೂತ್ ಮಟ್ಟದಲ್ಲಿ ಇಬ್ಬರನ್ನು ಆಯ್ಕೆ ಮಾಡಿ ಸಮಿತಿ ರಚಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಈ ಸಮಿತಿಯಲ್ಲಿ ಮಹಿಳೆಯರು ಸೇರಿದಂತೆ ಸಾಮಾಜಿಕ ನ್ಯಾಯದ ಕಲ್ಪನೆಯಲ್ಲಿ ಆಯ್ಕೆ ಮಾಡಲಾಗುತ್ತದೆ.

ಪ್ರತಿ ಬೂತ್‌ನಿಂದ ಇಬ್ಬರಂತೆ ರಾಜ್ಯದ 59 ಸಾವಿರ ಬೂತ್‌ಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಪ್ರಚಾರ ಸಮಿತಿಯ ರಾಜ್ಯ ಉಪಾಧ್ಯಕ್ಷ ಭೀಮಣ್ಣ ಮೇಟಿ, ಜಿಲ್ಲಾ ಉಸ್ತುವಾರಿ ಆದರ್ಶ ಯಲ್ಲಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ್ ಇಟಗಿ, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಜಿ.ಎಸ್.ಮಲ್ಲಿಕಾರ್ಜುನ ಪಾಟೀಲ್, ಗ್ಯಾರಂಟಿ ಉಸ್ತುವಾರಿ ಸಮಿತಿ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net