ದೈವಸ್ಥಾನದಿಂದ ಕಳ್ಳತನಕ್ಕೆ ಯತ್ನ, ಆರೋಪಿ ಬಂಧನ

arrested
Published on

ಕಡಬ: ಆಲಂಕಾರು ಗ್ರಾಮದ ನೆಕ್ಕರೆ ಎಂಬಲ್ಲಿರುವ ಉಳ್ಳಾಕ್ಲು ಮತ್ತು ಅಣ್ಣಪ್ಪ ಸ್ವಾಮಿ ದೈವಸ್ಥಾನದ ಬಾಗಿಲಿನ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ ಆರೋಪಿಯನ್ನು ಸೋಮವಾರ ರಾತ್ರಿ ಗ್ರಾಮಸ್ಥರೇ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಹನುಮಂತರಾಯ ಯಾನೆ ಗೌಡನ ಗೌಡ ಬಂಧಿತ ಆರೋಪಿ. ನೆಕ್ಕರೆ ಉಳ್ಳಾಕ್ಲು ಮತ್ತು ಅಣ್ಣಪ್ಪ ಸ್ವಾಮಿ ದೈವಸ್ಥಾನದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಆಲಂಕಾರು ಗುತ್ತುಮನೆ ನಿವಾಸಿ ಕೀರ್ತಿ ಅವರು ಸೋಮವಾರ ರಾತ್ರಿ ದೈವಸ್ಥಾನದ ಬಳಿ ಹೋದಾಗ ಆರೋಪಿ ದೈವಸ್ಥಾನದ ಬಾಗಿಲಿನ ಬೀಗ ಒಡೆಯಲು ಪ್ರಯತ್ನಿಸುತ್ತಿದ್ದ. ಈ ಬಗ್ಗೆ ಕೀರ್ತಿ ಅವರು ಸಂತೋಷ್ ಎಂಬುವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದು, ಅವರು ಬಂದ ನಂತರ ಬಾಗಿಲು ಒಡೆಯಲು ಪ್ರಯತ್ನಿಸಿದ ವ್ಯಕ್ತಿಯನ್ನು ವಿಚಾರಿಸಿದಾಗ ಹನುಮಂತರಾಯ ಯಾನೆ ಗೌಡನ ಗೌಡ ಎಂದು ತಿಳಿಸಿದ್ದು, ವಿಳಾಸ ಕೇಳಿದಾಗ ಯಾವುದೇ ಉತ್ತರ ನೀಡಿಲ್ಲ. ಬಳಿಕ ಅವರು ಆರೋಪಿಯನ್ನು ಕಡಬ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಕೀರ್ತಿ ನೀಡಿದ ದೂರಿನಂತೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net