

ನರಗುಂದ: ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ಮೂಗನೂರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಶಿವಕ್ಕ ಶೇಖಪ್ಪ ಮಡಿವಾಳರ (45) ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರಿಂದ ಅಪಾಯದಿಂದ ಬಚಾವಾಗಿದ್ದಾರೆೆ. ಏನಿದು ಘಟನೆ: ಶಿವಕ್ಕ ಮಡಿವಾಳರ ಎರಡ್ಮೂರು ತಿಂಗಳ ಹಿಂದೆ ಮಗಳ ಹೆರಿಗೆ ಸಂದರ್ಭದಲ್ಲಿ ಮೂಗನೂರಿನ ಮಹೇಶ ಹನುಮಂತಪ್ಪ ಮಾದರ ಅವರಿಂದ 39 ಸಾವಿರ ರೂ., ಅನಿಲ ಸಿದ್ಧಪ್ಪ ಮಾದರ ಅವರಿಂದ 20 ಸಾವಿರ ರೂ, ಅರ್ಜುನಪ್ಪ ಮಾದರ ಅವರಿಂದ 15 ಸಾವಿರ ರೂ. ಸೇರಿ ಒಟ್ಟು 74 ಸಾವಿರ ರೂ. ಹಣವನ್ನು ವಾರದ ಬಡ್ಡಿಗೆ (ನೂರಕ್ಕೆ 10 ರೂ) ಪಡೆದಿದ್ದರು. ಮಹೇಶನಿಂದ ಪಡೆದ 39 ಸಾವಿರ ರೂ. ಕೈಗಡ ಸಾಲಕ್ಕೆ 25 ಸಾವಿರ, ಅನಿಲ ಅವರಿಂದ ಪಡೆದ 20 ಸಾವಿರ ರೂ.ಗೆ 10 ಸಾವಿರ, ಅರ್ಜುನಪ್ಪ ಮಾದರ ಅವರಿಂದ ಪಡೆದ 15 ಸಾವಿರ ರೂ.ಗೆ 18 ಸಾವಿರ ರೂ. ಸೇರಿ ಒಟ್ಟು 53 ಸಾವಿರ ರೂ. ಹಣ ಮರುಪಾವತಿ ಮಾಡಿದ್ದಾರೆ. ಆದರೆ, ಕೆಲ ದಿನಗಳಿಂದ ಕೆಲಸವಿಲ್ಲದೆ ಹಣಕಾಸಿನ ಅಡಚಣೆ ಉಂಟಾಗಿ, ಬಡ್ಡಿ ಪಾವತಿಸಲು ಆಗಿರಲಿಲ್ಲ. ದಂಧೆಕೋರರು ಆಕೆ ಮನೆಗೆ ಬಂದು ಅವಾಚ್ಯ ಪದಗಳಿಂದ ನಿಂದಿಸಿ, ಮಗ ಈರಪ್ಪನಿಗೆ ಜೀವ ಬೆದರಿಕೆ ಹಾಕಿದ್ದರು ಎನ್ನಲಾಗುತ್ತಿದೆ. ಇದರಿಂದ ಮಾನಸಿಕವಾಗಿ ನೊಂದು ಶಿವಕ್ಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನರಗುಂದ ಠಾಣೆ ಪೊಲೀಸರು ಆಸ್ಪತ್ರೆಗೆ ಆಗಮಿಸಿ ಪ್ರಾಥಮಿಕ ವರದಿ ದಾಖಲಿಸಿಕೊಂಡಿದ್ದಾರೆ.