ಮಾರಕಾಸ್ತ್ರಗಳಿಂದ ಯುವಕನ ಕೊಲೆಗೆ ಯತ್ನ

murder
Published on

ಮೈಸೂರು: ಸಿನಿಮೀಯ ರೀತಿಯಲ್ಲಿ ದುಷ್ಕರ್ಮಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಯುವಕನ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದೆ.


ದೇವರಾಜ ಮೊಹಲ್ಲಾದ ಬಿಡಾರಂ ಕೃಷ್ಣಪ್ಪ ರಸ್ತೆಯ ದೇವರಾಜ ಪೊಲೀಸ್ ಠಾಣೆ ಬಳಿಯೇ ಹಾಡಹಗಲೇ ಲಾಂಗ್, ಮಚ್ಚುಗಳು ಝಳಪಳಿಸಿವೆ. ಕೊಲೆ ಯತ್ನಕ್ಕೆ ಹಳೇ ದ್ವೇಷವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.


ಬೆಂಗಳೂರಿನ ನಿವಾಸಿ ಸಯ್ಯದ್ ಹಬೀಬ್ ಅಲಿಯಾಸ್ ಸುಕ್ಕಾ (27) ಹಲ್ಲೆಗೊಳಗಾದ ಯುವಕ. ಮೂಲತಃ ಮೈಸೂರಿನ ಉದಯಗಿರಿ ನಿವಾಸಿಯಾದ ಹಬೀಬ್ ಬೆಂಗಳೂರಿನಲ್ಲಿ ವಾಸವಿದ್ದು, ಕೋರ್ಟ್ ಕೇಸ್ ನಿಮಿತ್ತ ಸ್ನೇಹಿತ ರಫೀಕ್ ಅಹಮ್ಮದ್ ಜಿಲಾಲ್‌ನೊಂದಿಗೆ ನಗರಕ್ಕೆ ಆಗಮಿಸಿದ್ದ. ಕೋರ್ಟ್ ಕೆಲಸ ಮುಗಿಸಿಕೊಂಡು ಸ್ನೇಹಿತನೊಂದಿಗೆ ಟೀ ಕುಡಿಯುತ್ತಾ ಕುಳಿತಿದ್ದ.

ಈ ಹೊತ್ತಿನಲ್ಲಿ ಕಾರಿನಲ್ಲಿ ಬಂದ ಏಳೆಂಟು ಜನ ದುಷ್ಕರ್ಮಿಗಳು ಲಾಂಗ್ ಮಚ್ಚುಗಳಿಂದ ಏಕಾಏಕಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಹಬೀಬ್‌ನ ಕೈ ಮತ್ತು ಬೆನ್ನಿನ ಮೇಲೆ ಗಾಯವಾಗಿದೆ. ಅಲ್ಲಿಂದ ತಪ್ಪಿಸಿಕೊಂಡು ಅಂಬೇಡ್ಕರ್ ಭವನದವರೆಗೂ ಹಬೀಬ್ ಓಡಿ ಹೋಗಿದ್ದಾನೆ. ಅಲ್ಲಿಯವರೆಗೂ ಬೆನ್ನು ಹತ್ತಿ ಬಂದಿರುವ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.


ಹಲ್ಲೆಯಿಂದಾಗಿ ರಸ್ತೆ ಬದಿ ಬಿದ್ದಿರುವುದನ್ನು ಕಂಡು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ತೀವ್ರವಾಗಿ ಗಾಯಗೊಂಡಿದ್ದ ಹಬೀಬ್‌ನನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.


ಹಬೀಬ್ ನಗರದಲ್ಲಿ ನೆಲೆಸಿದ್ದ ಸಂದರ್ಭದಲ್ಲಿ ಉದಯಗಿರಿಯ ಯುವಕರ ಗುಂಪಿನೊಂದಿಗೆ ಜಗಳವಾಗಿತ್ತು. ಘಟನೆ ಬಳಿಕ ಹಬೀಬ್ ಬೆಂಗಳೂರಿಗೆ ತೆರಳಿ ಅಲ್ಲೇ ವಾಸವಿದ್ದ. ಮಂಗಳವಾರ ಮೈಸೂರಿಗೆ ಬಂದಿರುವ ಮಾಹಿತಿ ಪಡೆದ ದುಷ್ಕರ್ಮಿಗಳ ತಂಡವು ಈತನ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಹಲ್ಲೆ ನಡೆಸಿದ ಸ್ಥಳದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net