ಹೊಸಮನೆಯಲ್ಲಿ ಪತ್ನಿ ಕೊಲೆಗೆ ಯತ್ನ, ಪತಿ ಬಂಧನ

Doddapete police station
ದೊಡ್ಡಪೇಟೆ ಪೊಲೀಸ್ ಠಾಣೆ
Published on

ಶಿವಮೊಗ್ಗ: ನಗರದ ಹೊಸಮನೆಯಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಗೆ ಚಾಕು ಇರಿದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಾಕು ಇರಿತದಿಂದ ಗಾಯಗೊಂಡಿದ್ದ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೊಸಮನೆ ನಿವಾಸಿ ಪದ್ಮಾವತಿ ಚಾಕು ಇರಿತಕ್ಕೆ ಒಳಗಾದವರು. ಆಕೆಯ ಪತಿ ವಿನಯ್‌ಕುಮಾರ್ ಬಂಧಿತ ಆರೋಪಿ. ಪದ್ಮಾವತಿ ಮತ್ತು ವಿನಯಕುಮಾರ್ 13 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ 9 ವರ್ಷದ ಮಗಳಿದ್ದಾಳೆ.

ಕಳೆದೆರಡು ವರ್ಷಗಳಿಂದ ದಂಪತಿ ನಡುವೆ ವೈಮನಸ್ಸು ಆರಂಭವಾಗಿತ್ತು ಎನ್ನಲಾಗಿದೆ. ಹಿಂದೆ ಪತಿ ವಿನಯಕುಮಾರ್ ವಿರುದ್ಧ ಪದ್ಮಾವತಿ ಅವರು ಮಹಿಳಾ ಠಾಣೆಗೆ ದೂರು ಕೂಡು ನೀಡಿದ್ದರು. ಅದನ್ನೇ ದ್ವೇಷದಿಂದ ಮನೆಗೆ ನುಗ್ಗಿದ ವಿನಯಕುಮಾರ್ ಪತ್ನಿಯ ಪಕ್ಕೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ. ನಂತರ ಪದ್ಮಾವತಿ ಅವರು ಆಕೆಯ ಸ್ನೇಹಿತೆ ಹಾಗೂ 112ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗಿ ಪ್ರಾಣ ಉಳಿಸಿಕೊಂಡಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿನಯಕುಮಾರ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net