ಪರಿಶಿಷ್ಟರ ಕೊಲೆಗೆ ಯತ್ನ; ಇಬ್ಬರಿಗೆ ಜೀವಾವಧಿ ಶಿಕ್ಷೆ

court
Published on

ವಿಜಯಪುರ: ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗಳಿಗೆ ಕೊಲೆ ಮಾಡಲು ಯತ್ನಿಸಿದ ಇಬ್ಬರಿಗೆ ಜೀವಾವಧಿ ಶಿಕ್ಷೆ ದಂಡ ವಿಧಿಸಿ 2ನೇ ಜಿಲ್ಲಾ ಮತ್ತು ಸತ್ರ ವಿಶೇಷ (ಎಸ್‌ಸಿ-ಎಸ್‌ಟಿ) ನ್ಯಾಯಾಲಯ ಬುಧವಾರ ತೀರ್ಪು ಪ್ರಕಟಿಸಿದೆ.

ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ಯಲ್ಲಪ್ಪ ಗಂಗಾರಾಮ ಕ್ಷತ್ರಿ ಹಾಗೂ ನಿಂಗಪ್ಪ ಮಲ್ಲೇಶಿ ಸಿಂದಗಿ ಶಿಕ್ಷೆಗೆ ಗುರಿಯಾಗಿದ್ದಾರೆ. ಇವರು 2023 ಜು. 14ರಂದು ಹಿರೇಮಸಳಿಯ ಫಾಲಾಕ್ಷಿ ಸಿಂದಗಿ ಎಂಬುವರ ದಾಬಾದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಇಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿವರ

ಪರಿಶಿಷ್ಟ ಜಾತಿಯ ಮಹೇಂದ್ರ ಲೋಕೂರ, ಉದಯಕುಮಾರ ಹೊಸಮನಿ ಹಾಗೂ ಹಣಮಂತ ಗುನ್ನಾಪುರ ಎಂಬುವರು ಫಾಲಾಕ್ಷಿ ಸಿಂದಗಿ ಇವರ ದಾಬಾಕ್ಕೆ ಊಟಕ್ಕೆ ಬಂದಿದ್ದರು. ದಾಬಾದಲ್ಲಿ ನಿಂಗಪ್ಪ ಸಿಂದಗಿ ಹಾಗೂ ಯಲ್ಲಪ್ಪ ಕ್ಷತ್ರಿ ಕೂಡ ಇದ್ದರು. ಈ ನಿಂಗಪ್ಪ ಸಿಂದಗಿ ಹಲವು ವರ್ಷಗಳಿಂದ ಉದಯಕುಮಾರ ಜೊತೆಗೆ ಸಣ್ಣ ಪುಟ್ಟ ಜಗಳ ಮಾಡಿಕೊಂಡೇ ಬಂದಿದ್ದನು. ಜು. 14 ರಂದು ರಾತ್ರಿ 8.20ರ ಸುಮಾರಿಗೆ ದಾಬಾಕ್ಕೆ ಊಟ ಮಾಡಲು ಬಂದ ಉದಯಕುಮಾರ ಹಾಗೂ ಹಣಮಂತ ಗುನ್ನಾಪುರ ಜೊತೆ ಜಗಳ ತೆಗೆದಿದ್ದಾರೆ. ಅಲ್ಲದೇ, ನಿಂಗಪ್ಪ ನೀರಿನ ಜಗ್ಗ ತೆಗೆದುಕೊಂಡು ಮುಖಕ್ಕೆ ಉಗ್ಗಿದ್ದಾನೆ. ಬಳಿಕ ನಿಂಗಪ್ಪ ಸಿಂದಗಿ ಗಟ್ಟಿಯಾಗಿ ಹಿಡಿದುಕೊಂಡಿದ್ದು ಯಲ್ಲಪ್ಪ ಗಾಜಿನ ಬಾಟಲ್‌ನಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ. ಕೂಡಲೇ ಗಾಯಾಳುಗಳನ್ನು ಚಿಕಿತ್ಸೆಗೆ ರವಾನಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಇಂಡಿ ಗ್ರಾಮೀಣ ಠಾಣೆ ಪೊಲೀಸರು ನ್ಯಾಯಾಲಯದಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಸತೀಶ ಎಲ್‌ಪಿ ಅವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 5 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆಂದು ಸರ್ಕಾರಿ ಅಭಿಯೋಜಕ ಹುಸೇನಸಾಬ ಮುಲ್ಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net