

ಸವಣೂರ: ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಕೊಲೆಗೆ ಯತ್ನಿಸಿ ಪರಾರಿಯಾದ ಘಟನೆ ಪಟ್ಟಣದ ಡಾ. ವಿ.ಕೃ.ಗೋಕಾಕ ವೃತ್ತದ ಹತ್ತಿರ ಗುರುವಾರ ನಡೆದಿದೆ.
ಆಬಿದ್ ಅಲ್ಲಾಭಕ್ಷ ಚೌದ್ರಿ (30) ಹಲ್ಲೆಗೊಳಗಾದ ಯುವಕ. ಹಳೇಯ ದ್ವೇಷದ ಹಿನ್ನೆಲೆಯಲ್ಲಿ ಎರಡು ಬೈಕ್ಗಳಲ್ಲಿ ಬಂದ ದುಷ್ಕರ್ವಿುಗಳು ಏಕಾಏಕಿ ಆಬಿದ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ತಲೆ, ಕೈ ಹಾಗೂ ದೇಹದ ಇತರ ಭಾಗಗಳಿಗೆ ಮಚ್ಚಿನಿಂದ ಬೀಸಿದ್ದರಿಂದ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಸವಣೂರಿನ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ವಿುಗಳ ಬಂಧನಕ್ಕೆ ಪೊಲೀಸ್ ತಂಡ ಕಾರ್ಯಪ್ರವೃತ್ತವಾಗಿದೆ.
2021ರ ಅ. 8 ರಂದು ಸವಣೂರ-ಕಾರಡಗಿ ರಸ್ತೆಯಲ್ಲಿ ನಡೆದಿದ್ದ ಅನ್ವರಶೇಖ ಅಲಿಯಾಸ್ ಟೈಗರ್ ಅನ್ವರನ ಬರ್ಬರ ಹತ್ಯೆಯ ಪ್ರಕರಣದಲ್ಲಿ ಆಬಿದ್ ಚೌದ್ರಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.