ಕೊಲೆ ಯತ್ನ ಅಪರಾಧಿಗೆ 9 ವರ್ಷ ಜೈಲು

Published on

ಮೈಸೂರು: ಜಮೀನು ವಿಚಾರವಾಗಿ ಸಂಬಂಧಿಯನ್ನೇ ಕೊಲ್ಲಲು ಯತ್ನಿಸಿದ ಅಪರಾಧಿಗೆ ನ್ಯಾಯಾಲಯ 9 ವರ್ಷ ಶಿಕ್ಷೆ ಹಾಗೂ 11 ಸಾವಿರ ರೂ. ದಂಡ ವಿಧಿಸಿದೆ.

ಸಂಬಂಧಿ ಕಾಳೇಗೌಡ ಅವರನ್ನು ಮಚ್ಚಿನಿಂದ ಕೊಲೆ ಮಾಡಲು ಯತ್ನಿಸಿದ ಕೆ.ಆರ್.ನಗರ ತಾಲೂಕು ಸಾತಿ ಗ್ರಾಮದ ರಾಜು ಶಿಕ್ಷೆಗೆ ಗುರಿಯಾದ ಅಪರಾಧಿ.

ಕಾಳೇಗೌಡ ಮತ್ತು ರಾಜು ಅವರ ನಡುವೆ ಜಮೀನಿನ ವಿಚಾರವಾಗಿ ವ್ಯಾಜ್ಯವಿದ್ದು, ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿತ್ತು. ಈ ಮಧ್ಯೆ 2016ರ ಜ.10ರಂದು ಗ್ರಾಮದ ಹೋಟೆಲ್‌ನ ಬಳಿ ನಿಂತಿದ್ದ ಕಾಳೇಗೌಡ ಅವರನ್ನು ರಾಜು, ಜಗಳ ತೆಗೆದು ಕೊಲೆ ಮಾಡಲು ಮುಂದಾಗಿ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಈ ಸಂಬಂಧ ಕಾಳೇಗೌಡ ಅವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಆರ್. ನಗರ ಠಾಣೆ ಪೊಲೀಸರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಹುಣಸೂರಿನ 8ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಟಿ.ಗೋವಿಂದಯ್ಯ ಅವರು ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಕೆ.ಎಂ.ಸಿ. ಶಿವಶಂಕರ ಮೂರ್ತಿ ವಾದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net