

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಬಜರಂಗದಳ ಮುಖಂಡನಿಗೆ ಹಲ್ಲೆಗೈದು ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಗೊಂಡ ಮಂಜೇಶ್ವರ ಕಡಂಬಾರು ನಿವಾಸಿ ಮಹಮ್ಮದ್ ಆಸಿಫ್‌ನನ್ನು ಕೊಲೆಗೈಯ್ಯಲು ಯತ್ನಿಸಿದ ಆರೋಪದಲ್ಲಿ ನಾಲ್ವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಇಡ್ಯಾ ಈಶ್ವರ ನಗರದ ಅಣ್ಣಪ್ಪ ಸ್ವಾಮಿ ಯಾನೆ ಮನು(24), ಪಡೀಲ್ ನಾರ್ಲದ ಸಚಿನ್(24), ಪಜೀರು ಪಾದಲ್ ಕೋಡಿಯ ಕುಶಿತ್(18) ಮತ್ತು ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಬಾಲಕನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಅಕ್ಟೋಬರ್ 16ರ ರಾತ್ರಿ ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಸಂಚರಿಸುತ್ತಿದ್ದ ಕುಂಪಲದ ಶರತ್ ಮತ್ತು ಕೇರಳದ ಇಬ್ರಾಹಿಂ ಖಲೀಲ್ ಎಂಬುವರ ಕಾರುಗಳ ಮಧ್ಯೆ ಸಣ್ಣ ಅಪಘಾತ ನಡೆದಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆದಿದ್ದು ಈ ಸಂದರ್ಭ ಖಲೀಲ್ ಮತ್ತು ಆತನ ಸಹೋದರ ಆಸಿಫ್ ಶರತ್‌ಗೆ ಕೈಯಲ್ಲಿ ಹಲ್ಲೆ ನಡೆಸಿದ ಆರೋಪ ಹಿನ್ನೆಲೆಯಲ್ಲಿ ಉಳ್ಳಾಲ ಠಾಣೆಗೆ ದೂರು ನೀಡಲಾಗಿತ್ತು. ಈ ವಿಚಾರವಾಗಿ ಪೊಲೀಸ್ ನಿರೀಕ್ಷಕರ ಬಳಿ ಮಾತನಾಡುವ ನಿಟ್ಟಿನಲ್ಲಿ ಅದೇ ದಿನ ಮಧ್ಯರಾತ್ರಿ ಶರತ್ ಅವರ ಸ್ನೇಹಿತ ಬಜರಂಗದಳ ಮುಖಂಡ ಅರ್ಜುನ್ ಮಾಡೂರು ಉಳ್ಳಾಲ ಠಾಣೆಗೆ ಭೇಟಿ ನೀಡಿದ್ದರು. ಈ ಸಂದರ್ಭ ಇನ್‌ಸ್ಪೆಕ್ಟರ್ ಹೊರಗೆ ಹೋಗಿದ್ದು, ಈ ವೇಳೆ ಅರ್ಜುನ್‌ಗೆ ಇನ್‌ಸ್ಪೆಕ್ಟರ್ ಅವರ ಕೊಠಡಿಯಲ್ಲೇ ಆಸಿಫ್ ಹಲ್ಲೆ ನಡೆಸಿದ್ದ.
ಈ ಘಟನೆ ಖಂಡಿಸಿ ಅಂದು ಮಧ್ಯರಾತ್ರಿ ಹಿಂದು ಸಂಘಟನೆ ಕಾರ್ಯಕರ್ತರು ಉಳ್ಳಾಲ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಪೊಲೀಸರು ಆರೋಪಿ ಆಸಿಫ್‌ನನ್ನು ವಶಕ್ಕೆ ಪಡೆದು ಕೇಸು ದಾಖಲಿಸಿ ಜೈಲಿಗೆ ತಳ್ಳಿದ್ದರು.
ನ.8ರಂದು ಆಸಿಫ್‌ಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ತನ್ನ ಕುಟುಂಬಸ್ಥರ ಜತೆ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ. ಕೆ.ಸಿ.ರೋಡ್ ದಾಟುತ್ತಿದ್ದಂತೆಯೇ ಆರೋಪಿಗಳು ಮಾರಕಾಯುಧಗಳೊಂದಿಗೆ ಆಸಿಫ್ ಇದ್ದ ಕಾರನ್ನು ಬೆನ್ನಟ್ಟಿದ್ದರು. ಇದರಿಂದ ಹೆದರಿದ ಆಸಿಫ್ ತಲಪಾಡಿ ಟೋಲ್‌ನಲ್ಲೂ ನಿಲ್ಲಿಸದೆ ತಪ್ಪಿಸಿಕೊಂಡಿದ್ದ. ಈ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ಬಳಿಕ ಉಳ್ಳಾಲ ಠಾಣೆಗೆ ಹಸ್ತಾಂತರಿಸಲಾಗಿತ್ತು. ಘಟನೆ ಬಗ್ಗೆ ಉಳ್ಳಾಲ ಠಾಣೆಗೆ ದೂರು ನೀಡಲಾಗಿದ್ದು ತನಿಖೆ ನಡೆಸಿದ ಪೊಲೀಸರು ಸಿಸಿಟಿವಿಯ ದಾಖಲೆ ಪರಿಶೀಲಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದರು.