ಸ್ನೇಹಿತನಿಂದಲೇ ಕೊಲೆ ಯತ್ನ

murder
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ರೌಡಿಗಳ ವಿರುದ್ಧ ಮಾತನಾಡಿದ ಹಿನ್ನೆಲೆಯಲ್ಲಿ ಕೋಪಗೊಂಡ ಸ್ನೇಹಿತನೇ ಮಧ್ಯವಯಸ್ಕನೋರ್ವನನ್ನು ಕಡಿದು ಕೊಲೆಗೈಯ್ಯಲು ಯತ್ನಿಸಿದ ಪ್ರಕರಣ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನರಿಂಗಾನ ಗ್ರಾಮದ ನೆತ್ತಿಲಪದವು ನಿವಾಸಿ ಮನ್ಸೂರ್(40) ಕೊಲೆಯತ್ನಕ್ಕೊಳಗಾಗಿದ್ದು, ಕೋಟೆಪುರ ನಿವಾಸಿ ನಮೀರ್ ಹಂಜ ಆರೋಪಿ.

ಆರೋಪಿ ಹಿಂದೆ ಉಳ್ಳಾಲದಲ್ಲಿ ಕುಖ್ಯಾತಿ ಗಳಿಸಿದ್ದ ಟಾರ್ಗೆಟ್ ತಂಡದ ಸದಸ್ಯ ಎಂದು ಹೇಳಲಾಗಿದೆ. ತನ್ನ ಸಹೋದರನಿಗೆ ಬಾಡಿಗೆ ಮನೆ ನೋಡಲೆಂದು ನೆತ್ತಿಲಪದವು ಬಳಿ ಹೋಗಿದ್ದು ಈ ಬಗ್ಗೆ ಮಾಹಿತಿ ಪಡೆದ ಮನ್ಸೂರ್, ರೌಡಿಗಳಿಗೆ ಬಾಡಿಗೆ ಮನೆ ನೀಡದಂತೆ ಸಂಬಂಧಿಕರಲ್ಲಿ ತಿಳಿಸಿದ್ದರು ಎನ್ನಲಾಗಿದೆ. ಇದರಿಂದ ಮನ್ಸೂರ್ ಹಾಗೂ ನಮೀರ್ ಹಂಜ ತಂಡಗಳ ನಡುವೆ ಮಾತಿನ ಚಕಮಕಿ, ಹೊಡೆದಾಟ ನಡೆದಿದೆ. ಇದೇ ಸಂದರ್ಭ ಆಕ್ರೋಶಿತನಾದ ನಮೀರ್, ಮನ್ಸೂರ್ ಕೈಗೆ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ್ದಾನೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲವು ವರ್ಷಗಳ ಹಿಂದೆ ಉಳ್ಳಾಲದಲ್ಲಿ ಆರಂಭಗೊಂಡಿದ್ದ ಟಾರ್ಗೆಟ್ ಹೆಸರಿನ ನಟೋರಿಯಸ್ ತಂಡ ಹನಿಟ್ರ್ಯಾಪ್, ಬಿಜೆಪಿ ಕಾರ್ಯಕರ್ತ ಜುಬೈರ್ ಕೊಲೆ ಸಹಿತ ಹಲವು ಅಪರಾಧ ಕೃತ್ಯಗಳನ್ನು ನಡೆಸುವ ಮೂಲಕ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿತ್ತು. ತಂಡದ ಪ್ರಮುಖನಾಗಿದ್ದ ಇಲ್ಯಾಸ್‌ನನ್ನು ವಿರೋಧಿ ತಂಡ ಆತನ ಮನೆಯಲ್ಲೇ ಕಡಿದು ಕೊಲೆಗೈದ ಬಳಿಕ ಟಾರ್ಗೆಟ್ ತಂಡ ಮೂಲೆ ಗುಂಪಾಗಿತ್ತು. ಆ ಸಂದರ್ಭ ಟಾರ್ಗೆಟ್ ತಂಡದಲ್ಲಿ ನಮೀರ್ ಹಂಜ ಕೂಡ ಸದಸ್ಯ ಆಗಿದ್ದ ಎನ್ನಲಾಗಿದೆ. ಪ್ರಸ್ತುತ ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗುವ ಮೂಲಕ ಸಾರ್ವಜನಿಕವಾಗಿ ಟಾರ್ಗೆಟ್ ಗುಂಪು ಮತ್ತೆ ಮುನ್ನೆಲೆಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net