ಛಲವಾದಿ ನಾರಾಯಣ ಸ್ವಾಮಿ ಮೇಲೆ ಹಲ್ಲೆ ಯತ್ನ ಖಂಡನೀಯ

mlc d.s.Arun
ಎಂಎಲ್‌ಸಿ ಡಿ.ಎಸ್.ಅರುಣ್
Published on

ಶಿವಮೊಗ್ಗ: ವಿಧಾನ ಪರಿಷತ್ ಪ್ರತಿಪಕ್ಷನಾಯಕ ಛಲವಾದಿ ನಾರಾಯಣ ಸ್ವಾಮಿ ಅವರ ಮೇಲೆ ಸಚಿವ ಪ್ರಿಯಾಂಕ ಖರ್ಗೆ ಬೆಂಬಲಿಗರು ಹಲ್ಲೆ ಯತ್ನ ನಡೆಸಿ ಬೆದರಿಕೆ ಹಾಕಿರುವುದು ಖಂಡನೀಯವಾಗಿದ್ದು, ಕಾಂಗ್ರೆಸ್ಸಿನ ಗೂಂಡಾ ರಾಜ್ಯಕ್ಕೆ ಈ ಘಟನೆ ಮಾದರಿಯಾಗಿದೆ ಎಂದು ಎಂಎಲ್‌ಸಿ ಡಿ.ಎಸ್.ಅರುಣ್ ಕಿಡಿಕಾರಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರ್ಗಿಯ ಚಿತ್ತಾಪುರ ಭೇಟಿಯ ವೇಳೆಯಲ್ಲಿ ಪ್ರತಿಪಕ್ಷ ನಾಯಕರ ಮೇಲೆ ಗೂಂಡಾ ಪ್ರವೃತ್ತಿ ತೋರಿಸಿದ ಖರ್ಗೆ ಬೆಂಬಲಿಗರು ತಿರಂಗಾ ಯಾತ್ರೆಗೆ ಅಡ್ಡಿಪಡಿಸಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಛಲವಾದಿ ನಾರಾಯಣ ಸ್ವಾಮಿ ಅವರು ದಲಿತ ನಾಯಕರಾಗಿದ್ದಾರೆ. ಅವರು ಖರ್ಗೆ ಕುಟುಂಬದ ಅಕ್ರಮ ಆಸ್ತಿಯ ಬಗ್ಗೆ ಸದನದಲ್ಲಿ ಗಮನ ಸೆಳೆದು ಹೋರಾಟ ನಡೆಸಿದ್ದರ ಪರಿಣಾಮ ಆಸ್ತಿಯನ್ನು ಹಿಂದಿರುಗಿಸಬೇಕಾಯಿತು. ಆ ಸೇಡನ್ನು ಅವರ ಬೆಂಬಲಿಗರ ಮೂಲಕ ತೀರಿಸಿಕೊಂಡಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ದುಂಡಾರ್ವರ್ತನೆ ತೋರಿದ ಖರ್ಗೆ ಬೆಂಬಲಿಗರನ್ನು ಕೂಡಲೇ ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಮುಖಂಡರಾದ ಕೆ.ವಿ.ಅಣ್ಣಪ್ಪ, ವಿನ್ಸೆಂಟ್ ರೋಡ್ರಿಗಸ್, ದರ್ಶನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net