ಎಟಿಎಂ ಕಳವುಗೆ ಯತ್ನ, ಆರೋಪಿಗಳ ಬಂಧನ

Published on

ಬಳ್ಳಾರಿ : ಇಲ್ಲಿನ ತಾಳೂರು ರಸ್ತೆಯಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂನಲ್ಲಿನ ಹಣ ದರೋಡೆಗೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಲಾಗಿದೆ ಎಂದು ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಹೇಳಿದರು.

ನಗರದ ಎಸ್ಪಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಗರದ ನಿವಾಸಿಗಳಾದ ಮೊಟ್ಟೆ ವ್ಯಾಪಾರಿ ಜೆ.ಅವಿನಾಶ್, ಸಿವಿಲ್ ಎಂಜಿನಿಯರ್ ಕೆ.ಜೆ.ಶಿವರಾಜ್ ಬಂಧಿತರು. ಕೃತ್ಯಕ್ಕೆ ಬಳಸಿದ ವಾಹನ, ಆಯುಧವನ್ನು ಜಪ್ತು ಮಾಡಲಾಗಿದೆ. ಮದ್ಯ ಸೇವಿಸಿ ಎಟಿಎಂನಲ್ಲಿನ ಹಣವನ್ನು ಕಳ್ಳತನಕ್ಕೆ ಪ್ರಯತ್ನಿಸಿದ್ದಾರೆ. ಹಣಕ್ಕಾಗಿ ಮಾಡಿದ್ದಾರಾ ಅಥವಾ ಯಾವ ಕಾರಣಕ್ಕೆ ಎಂಬುವುದು ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ಪತ್ತೆಗಾಗಿ ಐದು ತಂಡಗಳನ್ನು ರಚಿಸಲಾಗಿತ್ತು. 30 ಗಂಟೆಯೊಳಗೆ ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ ಎಂದು ಹೇಳಿದರು.

ಕೌಲ್‌ಬಜಾರ್ ಠಾಣಾ ವ್ಯಾಪ್ತಿಯ ಐಟಿಐ ಕಾಲೇಜಿನ ಆವರಣದಲ್ಲಿ ಯುವಕನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಲಾಗಿದೆ. ಹಲ್ಲೆ ಮಾಡುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈ ಸಂಬಂಧ ಯುವಕ ದೊಡ್ಡಬಸವ ಅವರಿಂದ ದೂರು ಪಡೆದುಕೊಂಡು ಆರೋಪಿಗಳಾದ ಶಶಿಕುಮಾರ್, ಕೆ.ತಿಮ್ಮಪ್ಪ, ಸಾಯಿಕುಮಾರ್, ಪಿ.ಮಹೇಶ್, ಧನಂಜಯ, ಸಲೋಮಾನ್ ರಾಜ್, ಶಂಕರ್, ಮಾರಿ, ಕಾರ್ತೀಕ್, ಚೇತನ, ಸಂತೋಷ, ಪ್ರೇಮ ನಾಯ್ಕ ಸೇರಿದಂತೆ 10 ಜನರನ್ನು ದಸ್ತಗಿರಿ ಮಾಡಲಾಗಿದೆ ಎಂದು ತಿಳಿಸಿದರು.

ನಗರದಲ್ಲಿ ರಾತ್ರಿ ಪಾಳೆಯದಲ್ಲಿ ಗಸ್ತು ತಿರುಗಲು ಸದ್ಯ ಸಿಬ್ಬಂದಿ ಕೊರತೆಯಿರುವ ಹಿನ್ನೆಲೆ ಹೊಸದಾಗಿ ನೇಮಕವಾಗುವ ಸಿಬ್ಬಂದಿಗೆ ತರಬೇತಿ ನಡೆಯುತ್ತಿದ್ದು, ಸೆಪ್ಟಂಬರ್‌ನಲ್ಲಿ ಪೂರ್ಣಗೊಂಡ ಬಳಿಕ ಜಿಲ್ಲೆಗೆ ನೂತನವಾಗಿ 84ಸಿಬ್ಬಂದಿ ಬರಲಿದ್ದಾರೆ. ಇದರಿಂದ ಸಿಬ್ಬಂದಿ ಕೊರತೆ ನೀಗಲಿದೆ. ರಾತ್ರಿ ಪಾಳೆಯ ಗಸ್ತುನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಕ್ರಮಕೈಗೊಳ್ಳಲಾಗುವುದು ಎಂದರು. ಎಎಸ್ಪಿ ರವಿಕುಮಾರ್, ಡಿವೈಎಸ್ಪಿ ಸಂತೋಷ್ ಚೌವ್ಹಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net