ಹಟ್ಟಿಚಿನ್ನದಗಣಿ: ಗಂಧದ ಮರಗಳ ಸರಣಿಗಳ್ಳತನ, ಮನೆಗಳ್ಳತನ, ಸಂತೆ ಬಜಾರಿನಲ್ಲಿ ಮೊಬೈಲ್ ಕಳ್ಳತನದಂಥಹ ಕೃತ್ಯಗಳು ಮರೆಮಾಚುವ ಮುನ್ನವೆ ಹಟ್ಟಿಚಿನ್ನದಗಣಿಯಲ್ಲಿ ಮಕ್ಕಳನ್ನು ಅಪಹರಣ ಮಾಡುತ್ತಿರುವ ಜಾಲವೊಂದು ಪಟ್ಟಣದಲ್ಲಿ ಬೀಡು ಬಿಟ್ಟಿರಬುದೆಂಬ ಆತಂಕ ಸ್ಥಳೀಯ ನಿವಾಸಿಗಳಲ್ಲಿ ಮನೆ ಮಾಡಿದೆ.
ಹಟ್ಟಿಚಿನ್ನದಗಣಿಗೆ ಸಂಪರ್ಕಿಸುವ ಸುತ್ತಲಿನ 6 ಮಾರ್ಗಗಳಿಗೂ ಯಾವೊಂದು ಕಡೆ ಚೆಕ್‌ಪೋಸ್ಟ್‌ಗಳಿಲ್ಲ. ಹಟ್ಟಿ ಸುತ್ತಲಿನ ಕೆಲ ಹಳ್ಳಿಗಳಿಂದ ಸಂತೆ, ಜಾತ್ರೆ ಮುಂತಾದೆಡೆ ಟಾಟಾ ಏಸ್, ಆಟೋಗಳಲ್ಲಿ ಹಿಂಡು-ಹಿಂಡಾಗಿ ಹದಿ ಹರೆಯದವರನ್ನು ಭಿಕ್ಷಾಟನೆಗಾಗಿ ಕರೆತಂದು, ಭಿಕ್ಷಾಟನೆ ಸೋಗಿನಲ್ಲಿ ಕಳವಿನ ಧಂದೆ ನಡೆಸುತ್ತಿರುವುದು ಅವ್ಯಾಹತವಾಗಿ ನಡೆದಿದೆ. ವಾಹನಗಳಲ್ಲಿ ವಿವಿಧ ಸಾಮಾನುಗಳ ವ್ಯಾಪಾರಕ್ಕೆಂದು ಆಗಮಿಸುವ ವ್ಯಾಪಾರಿಗಳು ಕಾಲನಿಗಳಲ್ಲಿ ಸುತ್ತಾಡಿ ಮಕ್ಕಳ ಅಪಹರಣಕ್ಕೀಳಿಯುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಪಟ್ಟಣದ ಖಾಸಗಿ ಶಾಲೆಯೊಂದರ 9ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಕಳ್ಳರ ಗುಂಪೊಂದು ಕಾರಿನಲ್ಲಿ ಕೂರಿಸಿಕೊಂಡು, ಅಬ್ದುಲ್ಲಾ ಕಾಲನಿ ಮೂಲಕ ಹಟ್ಟಿ ಕ್ಯಾಂಪ್ ಹಾಗೂ ಹಟ್ಟಿ ಪಟ್ಟಣವನ್ನು ಸಂಧಿಸುವ ಬೈ-ಪಾಸ್ ರಸ್ತೆ, ಕೋಠಾ ಕ್ರಾಸ್ ಮೂಲಕ ಕೋಠಾ, ಗುರುಗುಂಟಾ ಮಾರ್ಗವಾಗಿ ಗುರುವಾರ ಕರೆದೊಯ್ಯುತ್ತಿರುವಾಗ ಜಾಲಹಳ್ಳಿಯಲ್ಲಿ ಕಾರು ನಿಂತಿರುವಾಗ ಬಾಲಕ ಸಮಯೋಚಿತ ಬುದ್ಧಿಯಿಂದ ಕಾರಿನಿಂದ ಪರಾರಿಯಾಗಿ ಸಾರ್ವಜನಿಕರನ್ನು ಕರೆಸಿಗದ್ದಲ ಎಬ್ಬಿಸುತ್ತಲೆ ಕಾರಿನೊಂದಿಗೆ ಕಳ್ಳರು ಪರಾರಿಯಾಗಿದ್ದಾರೆ. ನಂತರ ಜಾಲಹಳ್ಳಿಯ ಸಾರ್ವಜನಿಕರು ಹಟ್ಟಿ ಪಟ್ಟಣಕ್ಕೆ ಬಂದು ಪಾಲಕರಿಗೆ ಬಾಲಕನನ್ನು ತಂದೊಪ್ಪಿಸಿದ್ದಾರೆ.
ಇದನ್ನೂ ಓದಿ: ದಾವಣಗೆರೆ ವಿವಿ ಆವರಣದಲ್ಲಿ ಯುವತಿ ಅಪಹರಣ ಯತ್ನ
ಸಾರ್ವಜನಿಕ ಪ್ರದೇಶಗಳಲ್ಲಿ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಯುವಕ-ಯುವತಿಯರಿಗೆ ಸಭೆ ಕರೆದು ಇಲಾಖೆ ವತಿಯಿಂದ ಜಾಗೃತಿ ಮೂಡಿಸಲಾಗಿದೆ. ಅಪರಿಚಿತರು ಪಟ್ಟಣದಲ್ಲಿ ಓಡಾಡುವುದು, ವ್ಯಾಪಾರ, ಭಿಕ್ಷಾಟನೆ ಸೋಗಿನಲ್ಲಿ ಸಾರ್ವಜನಿಕರ ಜತೆಗೆ ಸಂಪರ್ಕಿಸುವುದು ಕಂಡು ಬಂದರೆ ತಕ್ಷಣ ಇಲಾಖೆಗೆ ಮಾಹಿತಿ ನೀಡಬೇಕೆಂದು ಪೊಲೀಸ್ ಇಲಾಖೆ ಹೇಳುತ್ತಿದೆ.
ವಾಮಾಚಾರಕ್ಕೆ ಮಕ್ಕಳನ್ನು ಅಪಹರಿಸುವ ಶಂಕೆ ವ್ಯಕ್ತವಾಗಿದೆ. ಮಕ್ಕಳನ್ನು ಅಪಹರಿಸುವಲ್ಲಿ ಸ್ಥಳಿಯ ನಿವಾಸಿಗಳ ಕೈವಾಡವೂ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸಂಬಂಧಪಟ್ಟವರು ಗಮನಿಸಿ, ಮೊಬೈಲ್ ಟ್ಯಾಪ್ ಮಾಡಿಸಿ ಇಂಥಹ ಪ್ರಕರಣಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವುದರ ಜತೆಗೆ ಸಹಕರಿಸುವವರನ್ನು ನಿಯಂತ್ರಿಸಬೇಕು.
ಮಹ್ಮದ್ ಇಸಾಕ್
ಅಪಹರಣಕ್ಕೊಳಗಾದ ಬಾಲಕನ ತಂದೆ
ಬಾಲಕನನ್ನು ಅಪಹರಿಸುವ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಕಳ್ಳರನ್ನು, ಅಪಹರಣಕಾರರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಜಾಲ ಬೀಸಿದ್ದೇವೆ. ಇಲಾಖೆಯಿಂದ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳು ಕಂಡಕೂಡಲೆ ಇಲಾಖೆ ಗಮನಕ್ಕೆ ತರಬೇಕು.
ಪ್ರಕಾಶ್ ಎಲ್.ಮಾಳಿ ,
ಸಿಪಿಐ ಹಟ್ಟಿ