ದೇಶದಲ್ಲಿ ಮತದಾನ ಹಕ್ಕು ಕಸಿಯುವ ಯತ್ನ: ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯರೆಡ್ಡಿ ಆಕ್ರೋಶ

sowmya1
Published on

ಬೆಂಗಳೂರು:ಪ್ರಜಾಪ್ರಭುತ್ವದಲ್ಲಿ ಸಂವಿಧಾನವು ಮತದಾನದ ಹಕ್ಕು ಕೊಟ್ಟಿದೆ. ಆದರೆ, ಈ ಮತದಾನದ ಹಕ್ಕನ್ನು ವಂಚಿಸುವ ಕೆಲಸ ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿದೆ ಎಂದು ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಯನಗರದ ಇಂದಿರಾಗಾಂಧಿ ವೃತ್ತದಲ್ಲಿ ಗುರುವಾರ ಆಯೋಜಿಸಿದ್ದ ‘ಓಟ್‌ಚೋರಿ (ಮತಕಳ್ಳತನ) ವಿರುದ್ದ ಸಹಿ ಸಂಗ್ರಹ, ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚಿಕ್ಕ ಮನೆಯಲ್ಲಿ 80ಕ್ಕೂ ಅಧಿಕ ಮತದಾರರಿದ್ದಾರೆ. ಓರ್ವನ ಹೆಸರಲ್ಲಿ ಹಲವು ಕಡೆಗಳಲ್ಲಿ ಹೆಸರು ಇದೆ. 2023ರ ಜಯನಗರ ಕ್ಷೇತ್ರದ ಚುನಾವಣೆಯೇ ಇದಕ್ಕೆ ಸಾಕ್ಷಿಯಾಗಿದೆ. ವಿರೋಧ ಪಕ್ಷದ ನಾಯಕ ರಾಹುಲ್ಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ಮತಕಳ್ಳತನ ವಿರುದ್ದ ದೊಡ್ಡ ಹೋರಾಟವೇ ನಡೆಯುತ್ತಿದೆ. ಪ್ರತಿ ಪ್ರಜೆಗೂ ಮತದಾನದ ಹಕ್ಕು ಇದೆ. ಆದರೆ, ಮತ ದುರ್ಬಳಕೆಯಾಗಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ ಮಾತನಾಡಿ, ಮಹದೇವಪುರ ಕ್ಷೇತ್ರದಲ್ಲಿ ಬಿಜೆಪಿ ಮತಕಳ್ಳತನ ಎಸಗಿದೆ. ಸಂವಿಧಾನ, ಪ್ರಜಾಪ್ರಭುತ್ವ ಉಳಿಸುವ ಸಲುವಾಗಿ ರಾಹುಲ್​ಗಾಂಧಿ ಮತ ಕಳ್ಳತನ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಮತದಾರರ ಹೆಸರನ್ನು ತೆಗೆದು ಹಾಕಿರುವುದು ಮತ್ತು ಹೆಸರು ಸೇರ್ಪಡೆ ಮಾಡಿರುವ ಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ನೀಡುತ್ತಿಲ್ಲ ಎಂದು ಆರೋಪಿಸಿದರು. ಕ್ಷೇತ್ರದ ನೂರಾರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net