ಪೊಲೀಸರ ಜೀಪಿಗೆ ಲಾರಿಯಿಂದ ಗುದ್ದಿ ಸಿಬ್ಬಂದಿಗೆ ತಿವಿಯುವ ಯತ್ನ : ಲಾರಿ ಚಾಲಕನ ಕಾಲಿಗೆ ಪೊಲೀಸ್ ಗುಂಡೇಟು

New Project (31)
Published on

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ

ನೆಟ್ಟಣಿಗೆ ಮುಡ್ನೂರು ಗ್ರಾಮದ ಬೆಳ್ಳಿಚಡವು ಎಂಬಲ್ಲಿ ಈಶ್ವರಮಂಗಲ-ಪಳ್ಳತ್ತೂರು ರಸ್ತೆಯಲ್ಲಿ ಬುಧವಾರ ನಸುಕಿನ ವೇಳೆ ಪೊಲೀಸ್ ಗನ್ ಸದ್ದು ಮಾಡಿದೆ.

ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಲಾರಿಯನ್ನು ತಡೆಯಲು ಹೋದ ಸಂಪ್ಯ ಠಾಣೆಯ ಪೊಲೀಸರ ಜೀಪಿಗೆ ಹಿಂದಿನಿಂದ ಗುದ್ದಿ, ಕಾರಿನಲ್ಲಿ ಹಿಂಬಾಲಿಸುತ್ತಿದ್ದ ಪೊಲೀಸರಿಗೆ ಚೂಪಾದ ಆಯುಧ ತೋರಿಸುತ್ತಾ ಕಾರಿಗೆ ಡಿಕ್ಕಿ ಹೊಡೆಯಲು ಯತ್ನಿಸಿದ್ದಲ್ಲದೆ, ಹಿಡಿಯಲು ಹೋದ ಪೊಲೀಸರಿಗೆ ತಿವಿಯಲು ಮುಂದಾದ ಲಾರಿ ಚಾಲಕನ ಕಾಲಿಗೆ ಠಾಣೆಯ ಎಸ್‌ಐ ಗುಂಡು ಹಾರಿಸಿದ್ದಾರೆ.

ಕಾರಸಗೋಡು ತಾಲೂಕಿನ ದೇಲಂಪಾಡಿ ಗ್ರಾಮದ ಕಲ್ಲಡ್ಕ ನಿವಾಸಿ ಮಹಮ್ಮದ್ ಕೆ. ಎಂಬುವರ ಪುತ್ರ ಅಬ್ದುಲ್ ಕೆ.(40) ಎಂಬಾತ ಪೊಲೀಸರ ಮೇಲೆ ಆಕ್ರಮಣಕ್ಕೆ ಮುಂದಾಗಿದ್ದಾನೆ. ಕಾಲಿನ ಭಾಗಕ್ಕೆ ಗುಂಡೇಟು ತಗಲಿರುವ ಚಾಲಕನನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿಯಲ್ಲಿದ್ದ ಇನ್ನೊಬ್ಬ ಅಪರಿಚಿತ ಪರಾರಿಯಾಗಿದ್ದಾನೆ.

ಸಂಪ್ಯ ಠಾಣಾ ಎಸ್‌ಐ ಜಂಬೂರಾಜ್ ಮಹಾಜನ್ ಬುಧವಾರ ನಸುಕಿನ 3ರ ಸುಮಾರಿಗೆ ಹೆಡ್‌ಕಾನ್‌ಸ್ಟೆಬಲ್ ರಮೇಶ್, ಜೀಪು ಚಾಲಕ ಅವಿನಾಶ್ ಎಂಬುವರೊಂದಿಗೆ ಕೆಯ್ಯೂರು ಮಾಡಾವು ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಜಾಲ್ಸೂರು ಕಡೆಯಿಂದ ಕಾವು- ಈಶ್ವರಮಂಗಲ ಮೂಲಕ ಕೇರಳಕ್ಕೆ ಲಾರಿಯೊಂದರಲ್ಲಿ ಜಾನುವಾರುಗಳನ್ನು ಸಾಗಾಟ ಮಾಡಲಾಗುತ್ತಿರುವ ಕುರಿತು ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಐ ಅವರು ಹೆಡ್‌ಕಾನ್‌ಸ್ಟೆಬಲ್ ಭವಿತ್‌ರಾಜ್ ಅವರನ್ನು ಕಾವಿಗೆ ಬರಲು ಸೂಚಿಸಿದ್ದರು. ಬಳಿಕ ಎಸ್‌ಐ ಜಂಬೂರಾಜ್ ಮತ್ತು ಭವಿತ್‌ರಾಜ್ ಕಾರಿನಲ್ಲಿ ಮಾಡನ್ನೂರು ಸೇತುವೆ ಬಳಿ ನಿಂತು, ಉಳಿದ ಪೊಲೀಸರನ್ನು ಇಲಾಖಾ ವಾಹನದಲ್ಲಿ ಮುಂದೆ ಹೋಗಿ ನಿಲ್ಲುವಂತೆ ಸೂಚಿಸಿದ್ದರು.

ಕಾವು ಕಡೆಯಿಂದ ಮುಂಜಾನೆ 5.30ರ ವೇಳೆಗೆ ಬಂದ ಲಾರಿಯನ್ನು ಕಾರಿನಲ್ಲಿದ್ದ ಪೊಲೀಸರು ನಿಲ್ಲಿಸಲು ಸೂಚಿಸಿದರೂ ಚಾಲಕ ಲಾರಿ ನಿಲ್ಲಿಸದೆ ಮುಂದಕ್ಕೆ ಚಲಾಯಿಸಿಕೊಂಡು ಹೋಗಿದ್ದ. ಈಶ್ವರಮಂಗಲ ಪಂಚಾಯಿತಿ ಕಚೇರಿ ಬಳಿ ಇಲಾಖಾ ಜೀಪಿನಲ್ಲಿದ್ದ ಪೊಲೀಸರು ಲಾರಿ ನಿಲ್ಲಿಸಲು ಸೂಚಿಸಿದರೂ ಲಾರಿ ಚಾಲಕ ಪೊಲೀಸರ ಸೂಚನೆ ಧಿಕ್ಕಿರಿಸಿ ಮುಂದಕ್ಕೆ ತೆರಳಿದ್ದ. ಪೊಲೀಸರು ಲಾರಿಯನ್ನು ಜೀಪು ಮತ್ತು ಕಾರಿನಲ್ಲಿ ಹಿಂಬಾಲಿಸಿಕೊಂಡು ಹೋಗಿದ್ದು, ಪೊಲೀಸ್ ಜೀಪು ಚಾಲಕ ಲಾರಿಯನ್ನು ಓವರ್ ಟೇಕ್ ಮಾಡಿ ಲಾರಿ ನಿಲ್ಲಿಸಲು ಸೂಚನೆ ನೀಡುತ್ತಿದ್ದಂತೆಯೇ ಆರೋಪಿ ಪೊಲೀಸ್ ಜೀಪಿಗೆ ಹಿಂದಿನಿಂದ ಗುದ್ದಿದ್ದ. ಕಾರಿನಲ್ಲಿ ಹಿಂಬಾಲಿಸಿಕೊಂಡು ಹೋದ ಪೊಲೀಸರಿಗೆ ಚೂಪಾದ ಆಯುಧ ತೋರಿಸುತ್ತಾ ಕಾರಿಗೆ ಡಿಕ್ಕಿ ಹೊಡೆಯಲು ಯತ್ನಿಸಿದ್ದ. ಈ ವೇಳೆ ಕಾರಿನಲ್ಲಿದ್ದ ಎಸ್‌ಐ ಜಂಬೂರಾಜ್ ಅವರು ಒಂದು ಸುತ್ತು ಗುಂಡು ಹಾರಿಸಿದ್ದು, ಅದು ಲಾರಿಯ ಬಲ ಬದಿಯ ಬಾಡಿಗೆ ತಾಗಿ, ನಂತರ ಅದೇ ಗುಂಡು ಲಾರಿಯ ಮಿರರ್‌ಗೆ ತಾಗಿತ್ತು.

ಆ ಬಳಿಕವೂ ಚಾಲಕ ಲಾರಿ ನಿಲ್ಲಿಸದೆ ಮುಂದೆ ಸಾಗಿದ್ದು, ಪೊಲೀಸರು ಜೀಪು ಮತ್ತು ಕಾರಿನಲ್ಲಿ ಹಿಂಬಾಲಿಸಿಕೊಂಡು ಹೋಗಿ ಬೆಳ್ಳಿಚಡವು ಏರು ರಸ್ತೆಯ ಭಾಗದಲ್ಲಿ ಲಾರಿಯನ್ನು ಓವರ್ ಟೇಕ್ ಮಾಡಿದ್ದು, ಈ ವೇಳೆ ಚೂಪಾದ ಆಯುಧದೊಂದಿಗೆ ಲಾರಿಯಿಂದ ಕೆಳಗಿಳಿದು ತಪ್ಪಿಸಿಕೊಳ್ಳಲು ಯತ್ನಿಸಿದ ಲಾರಿ ಚಾಲಕನನ್ನು ಹಿಡಿಯಲು ಹೋದ ಪೊಲೀಸ್ ಸಿಬ್ಬಂದಿ ಮೇಲೆ ಆಯುಧದಿಂದ ತಿವಿಯಲು ಮುಂದಾಗಿದ್ದ. ಈ ವೇಳೆ ಎಸ್‌ಐ ಜಂಬೂರಾಜ್ ಸಿಬ್ಬಂದಿ ಮತ್ತು ತನ್ನ ಆತ್ಮರಕ್ಷಣೆಗಾಗಿ ಚಾಲಕನ ಎಡಕಾಲಿನ ಮೊಣಕಾಲಿಗೆ ಗುಂಡು ಹಾರಿಸಿರುವುದಾಗಿ ತಿಳಿದು ಬಂದಿದೆ.

12 ಜಾನುವಾರುಗಳಲ್ಲಿ ಒಂದು ಸಾವು: ಲಾರಿಯಲ್ಲಿ 7 ಎಮ್ಮೆ, 2 ಕೋಣ, 2 ಹಸು ಮತ್ತು 1 ಹೋರಿ ಇತ್ತು. ಈ 12 ಜಾನುವಾರುಗಳ ಪೈಕಿ ಒಂದು ಎಮ್ಮೆ ಮೃತಪಟ್ಟಿದೆ. ಲಾರಿ ಚಾಲಕ ಅಕ್ರಮವಾಗಿ ಮಾಂಸ ಮಾಡಿ ಲಾಭ ಗಳಿಸುವ ಉದ್ದೇಶದಿಂದ ಎಲ್ಲಿಂದಲೋ ಜಾನುವಾರುಗಳನ್ನು ಕಳವು ಮಾಡಿಕೊಂಡು ಬರುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಲಾರಿ ಚಾಲಕ ಅಬ್ದುಲ್ಲಾ, ಲಾರಿಯಲ್ಲಿದ್ದ ಇನ್ನೊಬ್ಬ ಅಪರಿಚಿತ ಹಾಗೂ ಲಾರಿ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಶಾಸಕರ ಶ್ಲಾಘನೆ

ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಶಾಸಕ ಅಶೋಕ್‌ಕುಮಾರ್ ರೈ, ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಶೂಟೌಟ್ ಮಾಡಿ ಆರೋಪಿಯನ್ನು ಬಂಧಿಸಿರುವ ಸಂಪ್ಯ ಠಾಣೆಯ ಪೊಲೀಸರ ಕ್ರಮವನ್ನು ಶ್ಲಾಘಿಸಿದ್ದಾರೆ.

ಪುತ್ತಿಲ ಕೈಯಲ್ಲಿ ಕತ್ತಿ, ಪೊಲೀಸ್ ಸ್ಪಷ್ಟನೆ

ಘಟನಾ ಸ್ಥಳಕ್ಕೆ ಬಂದಿದ್ದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸ್ಥಾಪಕಾಧ್ಯಕ್ಷ ಅರುಣ್‌ಕುಮಾರ್ ಪುತ್ತಿಲ ಅವರು ಕೈಯಲ್ಲಿ ಕತ್ತಿ ಹಿಡಿದುಕೊಂಡು ಹಗ್ಗ ತುಂಡರಿಸುವ ಮೂಲಕ ಗೋವುಗಳನ್ನು ರಕ್ಷಿಸುವ ದೃಶ್ಯದ ವಿಡಿಯೋ ವೈರಲ್ ಆಗಿತ್ತು. ಈ ಕುರಿತು ಪೊಲೀಸರು, ಲಾರಿಯಲ್ಲಿ 12 ಜಾನುವಾರುಗಳಲ್ಲಿ ಒಂದು ಸತ್ತಿರುವ ವಿಚಾರವನ್ನು ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿ ಜಾನುವಾರುಗಳನ್ನು ಲಾರಿಯಿಂದ ಕೆಳಗಿಳಿಸಲು ಅನುಮತಿ ಕೋರಿದ್ದರು. ಜಾನುವಾರುಗಳ ಸಾವು ತಪ್ಪಿಸಲು ಪೊಲೀಸರು ಅದಕ್ಕೆ ಒಪ್ಪಿದ್ದರು. ಬಳಿಕ ಹಗ್ಗ ಕತ್ತರಿಸಲು ಸಮೀಪದ ಮುಸ್ಲಿಂ ಕುಟುಂಬದ ಮನೆಯೊಂದರಿಂದ ಕತ್ತಿ ತರಲಾಗಿತ್ತು. ಈ ಕತ್ತಿಯನ್ನು ಪುತ್ತಿಲ ಅವರು ಹಗ್ಗ ಕತ್ತರಿಸಲು ಬಳಸಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರದಲ್ಲಿ ತಪ್ಪು ಮಾಹಿತಿ ಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಾರಿಯಲ್ಲಿದ್ದ ಜಾನುವಾರುಗಳು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net