

ಶಂಕರನಾರಾಯಣ: ಶಂಕರನಾರಾಯಣ ಪೊಲೀಸ್ ಠಾಣೆ ಸಮೀಪದ ಜಂಕ್ಷನ್‌ನಲ್ಲಿ ರಸ್ತೆ ಬದಿಯಲ್ಲಿ ಭಾನುವಾರ ಮಲಗಿದ್ದ ಗೋವುಗಳ ಕಳ್ಳತನದ ಯತ್ನ ನಡೆದಿದೆ.
ತಡ ರಾತ್ರಿ 1.45 ರ ಸುಮಾರಿಗೆ ಕೃತ್ಯ ನಡೆದಿದೆ. ಕಾರಿನಲ್ಲಿ ಬಂದವರು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಕೆಳಗೆ ಇಳಿದ ವ್ಯಕ್ತಿಗಳು ದನಗಳ ಬಳಿಗೆ ಬಂದು ಮಲಗಿದ್ದ ಗೋವುಗಳ ಕಳವಿಗೆ ಯತ್ನಿಸಿದ ದೃಶ್ಯ ಸಿ.ಸಿ. ಟಿವಿಯಲ್ಲಿ ಸೆರೆಯಾಗಿದೆ. ಘಟನೆ ಬಗ್ಗೆ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಗೋವು ಕಳ್ಳರು ಕಾರನ್ನು ಹತ್ತಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಕಾರಿನಲ್ಲಿ ಬಂದವರು ಗೋವುಗಳ ಕಳ್ಳತನಕ್ಕೆ ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸಿ.ಸಿ. ಟಿವಿಯಲ್ಲಿ ರಾತ್ರಿ ಕಾವಲು ಪೊಲೀಸರು ನಿಗಾ ವಹಿಸಿದ್ದು, ಗೋವು ಕಳ್ಳತನ ಯತ್ನ ವಿಫಲಗೊಳಿಸಿದ್ದಾರೆ. ಘಟನೆ ಕುರಿತು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಲಾಗಿದೆ ಎಂದು ಶಂಕರನಾರಾಯಣ ಪೊಲೀಸ್ ಠಾಣೆ ಉಪನಿರೀಕ್ಷಕ ನಾಸೀರ್ ಹುಸೇನ್ ತಿಳಿಸಿದ್ದಾರೆ.