

ರಟ್ಟಿಹಳ್ಳಿ: ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯ, ಉತ್ತಮ ಶಿಕ್ಷಣಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿವೆ. ರಟ್ಟಿಹಳ್ಳಿ ಮತ್ತು ಹಿರೇಕೆರೂರು ತಾಲೂಕಿನಲ್ಲಿ ಈಗಾಗಲೇ ಒಟ್ಟು 4 ವಸತಿ ಶಾಲೆಗಳಿವೆ. ಇನ್ನೂ ಎರಡು ವಸತಿ ಶಾಲೆಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ತಾಲೂಕಿನ ಯಡಗೋಡ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂಧನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ತಾಲೂಕಿನ ಯಡಗೋಡ ಗ್ರಾಮದ ಪ್ರೌಢ ಶಾಲೆಗೆ ಬೋರ್ವೆಲ್ ಕೊರೆಸಲಾಗುವುದು. ಶಾಲಾ ಕಟ್ಟಡಗಳನ್ನು ದುರಸ್ತಿಪಡಿಸಲಾಗುವುದು. ಪ್ರೌಢ ಶಾಲೆಗಳು ಇದ್ದಲ್ಲಿ ಹಾಸ್ಟೆಲ್ ಬೇಕೆಂಬ ಒತ್ತಾಯ ಎಲ್ಲಡೆ ಇದೆ. ಈಗ ವಸತಿ ಶಾಲೆಯಾಗಿ ಪರಿವರ್ತನೆಯಾಗುತ್ತಿವೆ. ಯಡಗೋಡ ಗ್ರಾಮಕ್ಕೆ ಸರ್ಕಾರಿ ವಸತಿ ನಿಲಯ ಮಂಜೂರಿಗೆ ಪ್ರಯತ್ನಿಸಲಾಗುವುದು. ಇಲ್ಲಿನ ಪ್ರೌಢ ಶಾಲೆಗೆ 2-3 ತಿಂಗಳಲ್ಲಿ ರಂಗಮಂದಿರ ನಿರ್ಮಾಣ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಕುಮದ್ವತಿ ತೋಟಗಾರಿಕೆ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಬಸನಗೌಡ ಗಂಗಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಾವೇರಿ ಹಾಲು ಒಕ್ಕೂಟ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ಮುಖ್ಯ ಶಿಕ್ಷಕ ಬಿ.ಆರ್. ತೆವರಿ, ಪಿಡಿಒ ಗಣೇಶ ಬಿದರಿ, ಗ್ರಾ.ಪಂ. ಸದಸ್ಯ ಪ್ರವೀಣ ಗಂಗಪ್ಪನವರ, ಬಸವರಾಜ ಬಾಗೂರು, ರೇಣುಕಾ ಕಂಕಣ್ಣನವರ, ಭರಮಗೌಡ ಗಂಗಪ್ಪನವರ, ಹನುಮಂತಪ್ಪ ಹಾವೇರಿ, ವಿಠ್ಠಲ ನಾಮದೇವ, ಕರಬಸಪ್ಪ ಕಡೇಮನಿ, ನಾಗಪ್ಪ ಹಾದ್ರಿಹಳ್ಳಿ, ಮುಖ್ಯ ಶಿಕ್ಷಕ ಸಿ.ಡಿ. ಕರಿಯಣ್ಣನವರ, ಎಚ್.ಎಸ್. ಚಪ್ಪರದಹಳ್ಳಿ, ಪ್ರಕಾಶ ಗುಬ್ಬಿ, ಕೆ.ಎಚ್. ಕುಸಗೂರು ಮತ್ತಿತರರು ಇದ್ದರು.