

ಕೊಳ್ಳೇಗಾಲ: ಬಾಡಿಗೆಗೆ ಕರೆದೊಯ್ದ ಬಳಿಕ ಗೂಡ್ಸ್ ವಾಹನ ಚಾಲಕನ ಮೇಲೆ ಹಲ್ಲೆ ಮಾಡಿ ಹಣ ದೋಚಲು ಮುಂದಾಗಿದ್ದ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊತ್ತನೂರು ಗ್ರಾಮದ ಚಂದು ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಉಮೇಶ್, ಶಂಕರ, ಜಿಮ್ ಮಂಜು ಹಣ ದೋಚಲು ಯತ್ನಿಸಿದವರು.
ಘಟನೆ ಹಿನ್ನೆಲೆ: ಮೇ 14ರಂದು ಉಮೇಶ್ ಎಂಬಾತ ಚಂದುವಿಗೆ ಕರೆ ಮಾಡಿದ್ದು ಮೈಸೂರಿನಿಂದ ಮರಿಯಪುರಕ್ಕೆ ಮಾವಿನ ಹಣ್ಣನ್ನು ತುಂಬಿಕೊಂಡು ಹೋಗುವ ಬಾಡಿಗೆಯಿದೆ ಎಂದು ತಿಳಿಸಿದ್ದಾನೆ. ಈ ಹಿಂದೆಯೂ ಉಮೇಶನಿಂದ ಚಂದುವಿಗೆ ಬಾಡಿಗೆ ಸಿಕ್ಕಿದ್ದರಿಂದ ಆತನನ್ನು ನಂಬಿ ಚಂದು ಬಾಡಿಗೆಗೆ ಒಪ್ಪಿದ್ದಾನೆ. ಅಂತೆಯೇ ಮೇ 15 ರಂದು ಬೆಳಗ್ಗೆ ಕೊತ್ತನೂರಿನಿಂದ ಚಂದು ತನ್ನ ಚಿಕ್ಕಪ್ಪನ ಮಗ ರಾಘವೇಂದ್ರ ಹಾಗೂ ಉಮೇಶ್ ಜತೆ ಗೂಡ್ಸ್ ವಾಹನದಲ್ಲಿ ಮೈಸೂರಿಗೆ ಬಾಡಿಗೆಗೆ ತೆರಳಿದ್ದನು.
ಈ ನಡುವೆ ಉಮೇಶನಿಗೆ ಪರಿಚಯವಿದ್ದ ವ್ಯಕ್ತಿಯೊಬ್ಬ ಇಲವಾಲ ಬಳಿ ಬಲವಂತದಿಂದ ತೋಟವೊಂದಕ್ಕೆ ಎಲ್ಲರನ್ನೂ ಕರೆದೊಯ್ದಿದ್ದಾನೆ. ಈ ವೇಳೆ ಕಾರಿನಲ್ಲಿ ಬಂದ ನಾಲ್ವರು ಉಮೇಶ್, ಚಂದು ಹಾಗೂ ರಾಘವೇಂದ್ರನನ್ನು ಏಕಾಏಕಿ ಮನೆಯೊಳಗೆ ಕೂಡಿ ಹಾಕಿದ್ದಾರೆ. ಬಳಿಕ ಚಂದುವಿನ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಹಣ ಕೊಡುವಂತೆ ಪೀಡಿಸಿದ್ದಾರೆ. ನನ್ನ ಬಳಿ ಹಣವಿಲ್ಲ ಎಂದಿದ್ದಕ್ಕೆ ಮೊಬೈಲ್‌ನಲ್ಲಿ ಬ್ಯಾಲೆನ್ಸ್ ಚೆಕ್ ಮಾಡಿ 13,000 ರೂ. ಇರುವುದನ್ನು ತಿಳಿದು 10,000 ರೂ. ನೀಡುವಂತೆ ಒತ್ತಾಯಿಸಿದ್ದಾರೆ. ಅಷ್ಟರಲ್ಲಿ ಯಾರೋ ತೋಟದ ಕಡೆ ಬಂದಾಗ ಚಂದುವಿನ ಮೊಬೈಲ್ ಕಿತ್ತುಕೊಂಡು ಸಿಮ್ ಕಾರ್ಡ್ ಮುರಿದು ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆ ಬಳಿಕ ಚಂದು, ರಾಘವೇಂದ್ರ, ಉಮೇಶ್‌ನನ್ನು ಊರಿಗೆ ಜತೆಗೆ ಕರೆತಂದು ಯಜಮಾನರಾದ ಸವಕಯ್ಯ ಮತ್ತು ಕುಮಾರ್ ಅವರಿಗೆ ವಿಷಯ ತಿಳಿಸಿದ್ದಾರೆ. ಈ ವೇಳೆ ಉಮೇಶ್ ಎಲ್ಲವನ್ನೂ ತಿಳಿಸಿದ್ದಾನೆ. ಬಳಿಕ ಚಂದು ಮೇ 16ರಂದು ಕೊಳ್ಳೇಗಾಲ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.