ಮೆಗಾಡೈರಿ ಸ್ಥಳಾಂತರಕ್ಕೆ ಯತ್ನ

Published on

ಬಳ್ಳಾರಿ ; ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ (ರಾಬಕೊವಿ) ಹಾಲು ಉತ್ಪಾದಕರ ಒಕ್ಕೂಟ ಲಕ್ಷಾಂತರ ಲೀ. ಸಾಮರ್ಥ್ಯದ ಮೆಗಾಡೈರಿಯನ್ನು ಜಿಲ್ಲೆಯಿಂದ ವಿಜಯನಗರ ಜಿಲ್ಲೆಗೆ ಸ್ಥಳಾಂತರಿಸಲು ಹುನ್ನಾರ ಎಂಬ ಅನುಮಾನ ಮೂಡಿದೆ.

ಸದ್ಯ ಕೆಎಂಆರ್‌ಸಿ ಅನುದಾನದಲ್ಲಿ ಮೊದಲ ಹಂತ 80 ಕೋಟಿ ರೂ. ಹಾಗೂ ಎರಡನೇ ಹಂತ 40 ಕೋಟಿ ರೂ. ಸೇರಿ ಒಟ್ಟಾರೆ 120 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ತಾಲೂಕಿನ ಕೊಳಗಲ್ ಗ್ರಾಮದಲ್ಲಿ 15 ಎಕರೆ ಜಮೀನನ್ನು ಗುರುತಿಸಿರುವ ಜಿಲ್ಲಾಧಿಕಾರಿಗಳು, ಅದರ ಮೌಲ್ಯ 2.92 ಕೋಟಿ ರೂ. ಹಣವನ್ನು ಪಾವತಿಸಿ ಖರೀದೀಸುವಂತೆ ಒಕ್ಕೂಟದ ನಿರ್ದೇಶಕರಿಗೆ ಆದೇಶಿಸಿದ್ದಾರೆ. ಆದರೆ, ಒಕ್ಕೂಟದಲ್ಲಿ ಆಡಳಿತ ಮಂಡಳಿ ಸದಸ್ಯರ (ನಿರ್ದೇಶಕರ) ಕಳೆದ ವರ್ಷ ಮೇ 15ಕ್ಕೆ ಮುಕ್ತಾಯವಾಗಿದ್ದು, ನೂತನ ನಿರ್ದೇಶಕ ನೇಮಕಾತಿಗೆ ಚುನಾವಣೆಯೂ ನಡೆದಿಲ್ಲ. ಹಾಗಾಗಿ ಸದಸ್ಯರು ಇಲ್ಲದಿರುವುದರಿಂದ ಆಡಳಿತ ಒಪ್ಪಿಗೆ ಇಲ್ಲದೇ ಜಮೀನು ಖರೀದಿಗೆ ಹಣ ಬಿಡುಗಡೆಗೊಳಿಸಿಲ್ಲ.

ಅಧ್ಯಕ್ಷರ ಹೊಸ ಖ್ಯಾತೆ : ಜಿಲ್ಲೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೆಗಾಡೈರಿಯ ಸ್ಥಳಕ್ಕೆ 2.92 ಕೋಟಿ ರೂ. ಹಣ ಒದಗಿಸಿ ಎಂಬುದಾಗಿ ಬಳ್ಳಾರಿ ಡಿಸಿ ಆದೇಶಿಸಿದ್ದಾರೆ. ಆದರೆ, ಈ ಮೆಗಾಡೈರಿಯನ್ನು ವಿಜಯನಗರ ಜಿಲ್ಲೆಯಲ್ಲಿ ನಿರ್ಮಿಸಲು ಎಲ್ಲ ಸದಸ್ಯರು ಒಪ್ಪಿದರೆ, ಆ ಸ್ಥಳಕ್ಕೆ ಹಣ ನೀಡುವ ಅಗತ್ಯವಿಲ್ಲ ಎಂದು ವಿಜಯನಗರ ಡಿಸಿ ಸೂಚಿಸಿದ್ದಾರೆ ಎಂಬುದಾಗಿ ಸದಸ್ಯರ ಮುಂದೆ ಕೆಎಂಎಫ್ ಅಧ್ಯಕ್ಷರು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಒಕ್ಕೂಟದ ನಿರ್ದೇಶಕರು ನಿರಾಕರಿಸಿದ್ದು, ಬಳ್ಳಾರಿಯಿಂದ ವಿಜಯನಗರಕ್ಕೆ ಮೆಗಾಡೈರಿಯನ್ನು ಸ್ಥಳಾಂತರಿಸುವ ಹುನ್ನಾರ ನಡೆದಿದೆ ಎಂದು ಒಕ್ಕೂಟದ ನಿರ್ದೇಶಕರೊಬ್ಬರು ತಿಳಿಸಿದರು.

ಸದಸ್ಯರ ಸಂಖ್ಯೆ ತಗ್ಗಿಸುವ ಹುನ್ನಾರ : ರಾಬಕೊವಿ ಒಕ್ಕೂಟದಲ್ಲಿ ಬಳ್ಳಾರಿಯಿಂದ ವಿಜಯನಗರ ಜಿಲ್ಲೆಯಾಗಿ ವಿಭಜನೆಯಾಗುವುದಕ್ಕಿಂತ ಮುನ್ನ ಬಳ್ಳಾರಿ, ಕೊಪ್ಪಳ, ರಾಯಚೂರು ಹಾಗೂ ನಾಮ ನಿರ್ದೇಶಿತ ಸೇರಿ ತಲಾ ನಾಲ್ವರು ಸೇರಿ ಒಟ್ಟು 16 ಜನ ನಿದೇಶಕರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ವಿಜಯನಗರ ಜಿಲ್ಲೆಯಾದ ಬಳಿಕ ನಡೆದ ಕೊನೆಯ ಒಕ್ಕೂಟ ಸಭೆಯಲ್ಲಿ ವಿಜಯನಗರ ಆರು, ಕೊಪ್ಪಳ ಐದು, ರಾಯಚೂರು ಎರಡು, ಬಳ್ಳಾರಿ ಒಂದು ಹಾಗೂ ನಾಲ್ವರು ನಾಮನಿರ್ದೇಶಿತ ಸೇರಿ ಒಟ್ಟು 18 ನಿರ್ದೇಶಕರನ್ನು ಆಯ್ಕೆ ಮಾಡಿ ಒಕ್ಕೂಟದ ಜಂಟಿ ನಿಬಂಧಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಜಂಟಿ ನಿಬಂಧಕರನ್ನು ಈ ಪ್ರಸ್ತಾವನೆ ನಿರಾಕರಿಸಿ ಜಿಲ್ಲೆಯಿಂದ ಸಮನಾಗಿ ನಿರ್ದೇಶಕರನ್ನು ಆಯ್ಕೆ ಮಾಡಿ ಎಂಬುದಾಗಿ ಆದೇಶಿಸಿದ್ದರು. ಒಕ್ಕೂಟದ ನಿರ್ದೇಶಕ ಸಂಖ್ಯೆ ಗೊಂದಲದಿಂದ ಹೈಕೋರ್ಟ್ ನಲ್ಲಿ ತಡೆಯಾಜ್ಞೆ ತರಲಾಗಿದೆ. ಒಟ್ಟಾರೆ, ಜಿಲ್ಲೆಯಿಂದ ನಿರ್ದೇಶಕರ ಸಂಖ್ಯೆ ತಗ್ಗಿಸಿ ಮೆಗಾಡೈರಿಯನ್ನು ಬೇರೆಡೆ ಸ್ಥಳಾಂತರಿಸಲು ಹುನ್ನಾರ ನಡೆದಿದೆ ಎಂಬುದು ಮಾತ್ರ ಬಹಿರಂಗವಾಗಿದೆ.

ಕೋಟ್... ವಿಜಯನಗರ ಜಿಲ್ಲೆಯಲ್ಲಿ ಮೆಗಾಡೈರಿ ಸ್ಥಾಪಿಸಲು ನಮಗೆ ಏನು ತೊಂದರೆಯಿಲ್ಲ. ಆದರೆ, ಜಿಲ್ಲೆಯಲ್ಲಿ ನಿರ್ಮಾಣವಾಗಬೇಕಿದ್ದ ಮೆಗಾಡೈರಿಯನ್ನು ಸ್ಥಳಾಂತರಿಸಲು ಯತ್ನಿಸಿದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.

- ಆರ್.ಮಾಧವರೆಡ್ಡಿ, ಅಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net