ಅಜೆಕಾರು ಕೊಲೆ ಪ್ರಕರಣ ಆರೋಪಿ ರಕ್ಷಣೆಗೆ ಪ್ರಯತ್ನ

udp-4-ajekaru
Published on

ಉಡುಪಿ: ಕಾರ್ಕಳದ ಅಜೆಕಾರಿನಲ್ಲಿ ಪ್ರಿಯಕರನೊಂದಿಗೆ ಶಾಮೀಲಾಗಿ ಗಂಡನನ್ನು ಕೊಲೆಗೈದ ಪ್ರಕರಣದಲ್ಲಿ ಆರೋಪಿ ದಿಲೀಪ್​ ಹೆಗ್ಡೆ ತಂದೆ ಪ್ರಕರಣದ ಹಾದಿ ತಪ್ಪಿಸಲು ಪೊಲೀಸರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದು ಮೃತ ಬಾಲಕೃಷ್ಣ ಸಹೋದರ ಪ್ರಕಾಶ್​ ಪೂಜಾರಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಪತ್ರಿಮಾ ಮನೆಯವರಿಗೂ ಕರೆಗಳು ಬರುತ್ತಿದ್ದು, ಪ್ರಕರಣದಲ್ಲಿ ಆಸಕ್ತಿ ತೋರಿಸದಂತೆ ಬೆದರಿಕೆ ಹಾಕುತ್ತಿದ್ದಾರೆ. ವಿವಿಧ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಪ್ರಕರಣದ ದಿಕ್ಕು ತಪ್ಪಿಸಲು ನೋಡುತ್ತಿದ್ದಾರೆ. ತನಿಖೆಯ ದಾರಿ ತಪ್ಪಿದ್ದಲ್ಲಿ ಸಾಮಾಜಿಕ ಸಂಘಟನೆಗಳ ಬೆಂಬಲದೊಂದಿಗೆ ಹೋರಾಟ ನಡೆಸುತ್ತೇವೆ. ಈಗಾಗಲೇ ಅನೇಕ ಸಂಘಟನೆಗಳು ನ್ಯಾಯ ದೊರಕಿಸಿ ಕೊಡಲು ಬೆಂಬಲವನ್ನು ಸೂಚಿಸಿವೆ ಎಂದರು.

ವೈದ್ಯರನ್ನೂ ವಿಚಾರಗೊಳಪಡಿಸಿ

ಕಳೆದ ಮೂರು ತಿಂಗಳಿನಿಂದ ಅಣ್ಣ ಬಾಲಕೃಷ್ಣ ಅವರಿಗೆ ಪತ್ನಿ ಪ್ರತಿಮಾ ವಿಷ ಉಣಿಸುತ್ತಿದ್ದಳು. ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗೆ ಮಣಿಪಾಲ, ಮಂಗಳೂರು, ಬೆಂಗಳೂರು ಆಸ್ಪತ್ರೆಗಳಿಗೆ ದಾಖಲಾಗಿದ್ದರೂ ದೇಹದಲ್ಲಿ ವಿಷವಿರುವ ಅಂಶ ವೈದ್ಯರ ಗಮನಕ್ಕೆ ಏಕೆ ಬರಲಿಲ್ಲ ಎಂಬುದಾಗಿ ಪ್ರಶ್ನಿಸಿದ್ದಾರೆ. ವೈದ್ಯರನ್ನು ಸಂಪರ್ಕಿಸಲು ಪ್ರತಿಮಾ ಬಿಟ್ಟಿಲ್ಲ. ಹೀಗಾಗಿ ಚಿಕಿತ್ಸೆ ನೀಡಿದ ವೈದ್ಯರನ್ನು ವಿಚಾರಣೆಗೊಳಪಡಿಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಕುಟುಂಬಿಕರಾದ ತಾರಾನಾಥ್​ ಕೋಟ್ಯಾನ್​, ಸಂಜೀವ ಪೂಜಾರಿ, ಶಶಿರೇಖಾ ಉಪಸ್ಥಿತರಿದ್ದರು.

ವಿಷ ಉಣಿಸಿದ ಅನುಮಾನ ಬಾಲಕೃಷ್ಣ ಅಂತ್ಯಸಂಸ್ಕಾರಕ್ಕೆ ತರಾತುರಿಯಲ್ಲಿ ಸಿದ್ಧತೆ ನಡೆಸಲಾಗಿತ್ತು. ಆದರೆ ನಾನು ಮೃತದೇಹವನ್ನು ಗಮನಿಸಿದಾಗ ಗಾಯದ ಗುರುತುಗಳು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದೆ. ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಬಗ್ಗೆ ಪ್ರತಿಮಾಳನ್ನು ಪ್ರಶ್ನಿಸಿದಾಗ ನೈಜ ಸಂಗತಿ ಬಾಯಿಬಿಟ್ಟಿದ್ದಾಳೆ. ನನ್ನ ಆರೋಗ್ಯದಲ್ಲೂ ಕೆಲವು ತಿಂಗಳಿನಿಂದ ವ್ಯತ್ಯಾಸ ಉಂಟಾಗುತ್ತಿದೆ. ನನಗೂ ಆಕೆ ವಿಷ ಹಾಕಿರುವ ಬಗ್ಗೆ ಅನುಮಾನವಿದ್ದು, ವೈದ್ಯಕಿಯ ತಪಾಸಣೆ ಮಾಡಿಸಿಕೊಳ್ಳುವೆ. -ಸಂದೀಪ್​, ಆರೋಪಿ ಪ್ರತಿಮಾ ಸಹೋದರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net