

ಠಾಣೆ ಮೆಟ್ಟಿಲೇರಿತು ಮಾಜಿ ಶಾಸಕರ ಹಾದಿ- ಬೀದಿ ರಂಪಾಟ
ಹೊಸಪೇಟೆ: ಕಾಂಗ್ರೆಸ್‌ನ ಇಬ್ಬರು ಮಾಜಿ ಶಾಸಕರ ಹಾದಿ- ಬೀದಿ ರಂಪಾಟ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಹಾಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರೂ ಆಗಿರುವ ಸಿರಾಜ್ ಶೇಖ್ ವಿರುದ್ಧ ಜಾತಿ ನಿಂದನೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಎಚ್.ಬಿ.ಹಳ್ಳಿ ಪಟ್ಟಣದಲ್ಲಿ ಆಗಸ್ಟ್ ೧೨ ರಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಆಗಮಿಸಿದ್ದ ವೇಳೆ ಸ್ವಾಗತ ಕೋರಿ ಅಳವಡಿಸಿದ್ದ ಬ್ಯಾನರ್‌ಗಳಲ್ಲಿ ತಮ್ಮ ಭಾವಚಿತ್ರ ಹಾಕದಿರುವ ಬಗ್ಗೆ ಮಾಜಿ ಶಾಸಕರೂ ಆಗಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿರಾಜ್ ಶೇಖ್ ಆಕ್ಷೇಪಿಸಿದ್ದರು. ಇದು ಮಾಜಿ ಶಾಸಕ ಭೀಮಾನಾಯ್ಕ ಜತೆಗೆ ವಾಗ್ವಾದಕ್ಕೆ ಕಾರಣವಾಗಿತ್ತು. ಇದೇ ವೇಳೆ ಭೀಮಾನಾಯ್ಕ ಮತ್ತು ಕಾಂಗ್ರೆಸ್ ಸದಸ್ಯರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಅಶ್ಲೀಲವಾಗಿ ಕೈ ಸನ್ಹೆ ಮಾಡಿದ್ದಾರೆ.
ನಂತರ ಕೆಡಿಪಿ ಸಭೆ ನಡೆಯುತ್ತಿದ್ದ ಪಟ್ಟಣದ ಜ್ಯೂನಿಯರ್ ಕಾಲೇಜು ಆವರಣಕ್ಕೆ ತಮ್ಮ ಬೆಂಬಲಿಗರೊAದಿಗೆ ಆಗಮಿಸಿದ ಸಿರಾಜ್ ಶೇಖ್ ಮಾಜಿ ಶಾಸಕ ಭೀಮಾನಾಯ್ಕಗೆ ಜಾತಿ ನಿಂದನೆ ಮಾಡಿದರು. ಅಲ್ಲೇ ಇದ್ದ ಅವರ ಅಳಿಯ ಮಂಜುನಾಥ ಅವರ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು, ಕೊಲೆಗೆ ಯತ್ನಿಸಿದ್ದಾರೆ ಎಂದು ದೂರಲಾಗಿದೆ. ಈ ಕುರಿತು ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾಂಗ್ರೆಸ್ ನಾಯಕ ಕೆ.ಸಿ.ಕೊಂಡಯ್ಯ, ಸಿರಾಜ್ ಶೇಖ್ ನೇರ ಹೊಣೆ ಎಂದು ಆರೋಪಿಸಿ ಭೀಮಾನಾಯ್ಕ ಇತ್ತೀಚೆಗಷ್ಟೇ ವರಿಷ್ಠರಿಗೆ ಪತ್ರ ಬರೆದಿದ್ದರು.