ಪುರಸಭೆ ಜಾಗ ಅಕ್ರಮ ಹಂಚಿಕೆಗೆ ಯತ್ನ

Attempt to illegally distribute municipal land
ಮಹಾಲಿಂಗಪುರ ಕೆಂಗೇರಿಮಡ್ಡಿಯ ಸಾಯಿ ಮಂದಿರದ ಹಿಂಭಾಗ ಕೆರೆ ಹತ್ತಿರದ ಸರ್ವೇ ನಂ.29/1 ರಲ್ಲಿನ ಪುರಸಭೆ ಖಾಲಿ ಜಾಗ ರಕ್ಷಣೆಗೆ ಒತ್ತಾಯಿಸಿ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪುರಸಭೆ ಸದಸ್ಯರಾದ ಬಸವರಾಜ ಹಿಟ್ಟಿನಮಠ, ಪ್ರಲ್ಹಾದ ಸಣ್ಣಕ್ಕಿ, ಬಸವರಾಜ ಚಮಕೇರಿ, ರವಿ ಜವಳಗಿ, ಮುಖಂಡರಾದ ಮಹಾಲಿಂಗ ಮುದ್ದಾಪುರ, ಚನ್ನಪ್ಪ ರಾಮೋಜಿ ಇದ್ದರು.
Published on

ಮಹಾಲಿಂಗಪುರ: ಕೆಂಗೇರಿಮಡ್ಡಿಯ ಸಾಯಿಮಂದಿರದ ಹಿಂಭಾಗ ಕೆರೆ ಹತ್ತಿರ ಸರ್ವೇ ನಂ.29/1 ರಲ್ಲಿನ ಪುರಸಭೆಗೆ ಸೇರಿದ 3 ಎಕರೆ 26 ಗುಂಟೆ ಖಾಲಿ ಜಾಗೆವಿದ್ದು, ಅದನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗುತ್ತಿದೆ ಎಂದು ಕೆಲ ಸದಸ್ಯರು ಬಾಗಲಕೋಟೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಜಿಲ್ಲಾಧಿಕಾರಿಗೆ ಶುಕ್ರವಾರ ದೂರು ನೀಡಿರುವ 5 ಜನ ಪುರಸಭೆ ಸದಸ್ಯರು, ಕೆಲವು ರಾಜಕೀಯ ಮುಖಂಡರು ಸಾರ್ವಜನಿಕರಿಂದ ಲಕ್ಷಾಂತರ ಹಣ ಪಡೆದು ಪುರಸಭೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ನಿವೇಶನ ನಿರ್ಮಿಸಿ ಹಂಚಿಕೆ ಮಾಡುತ್ತಿದ್ದಾರೆ. ಇದರಲ್ಲಿ ಪುರಸಭೆ ಕೆಲವು ಅಧಿಕಾರಿಗಳೂ ಶಾಮೀಲಾಗಿದ್ದಾರೆ.

ಈ ಖಾಲಿ ಜಾಗದ ಪೂರ್ವಭಾಗದಲ್ಲಿ ಪುರಸಭೆ ಮಾಲೀಕತ್ವದ ಜಾಗದಲ್ಲಿ ಜನವಸತಿ ಇದೆ. ಪಶ್ಚಿಮ ಭಾಗದಲ್ಲಿ ಖಾಸಗಿ ನಿವೇಶನಗಳು ಇರುವ ಕಾರಣ ಪುರಸಭೆಗೆ ಸೇರಿದ ಖಾಲಿ ಜಾಗಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ತಕ್ಷಣ ಈ ಖಾಲಿ ಜಾಗವನ್ನು ಸರ್ವೇ ಮಾಡಿಸಿ ಗಡಿ ಗುರುತು ಮಾಡಿ ಪುರಸಭೆ ವಶಕ್ಕೆ ಪಡೆಯಬೇಕು. ಜಮಖಂಡಿ ನಗರಾಭಿವೃದ್ಧಿ ಪ್ರಾಧಿಕಾರದ ನೆರವು ಪಡೆದು ಪುರಸಭೆ ವತಿಯಿಂದ ನಿವೇಶನ ರಚಿಸಿ ಎಲ್ಲಿಯೂ ಜಾಗ ಇಲ್ಲದ ಅರ್ಹ ಬಡವರಿಗೆ ಹಂಚುವ ಕೆಲಸ ಆಗುವಂತೆ ನೋಡಿಕೊಳ್ಳಬೇಕು ಎಂದು ಸದಸ್ಯರು ದೂರಿನಲ್ಲಿ ತಿಳಿಸಿದ್ದಾರೆ.

ಈ ಅಕ್ರಮ ಹಂಚಿಕೆಯಲ್ಲಿ ಲಕ್ಷಾಂತರ ರೂ.ಅವ್ಯವಹಾರ ನಡೆಯುತ್ತಿದ್ದು, ತಾವು ಶೀಘ್ರ ಅಧಿಕಾರಿಗಳಿಗೆ ಆದೇಶಿಸಿ ಅಕ್ರಮ ನಿವೇಶನ ಹಂಚಿಕೆ ತಡೆಯಬೇಕೆಂದು ಪುರಸಭೆ ಸದಸ್ಯರಾದ ಬಸವರಾಜ ಹಿಟ್ಟಿನಮಠ, ಪ್ರಲ್ಹಾದ ಸಣ್ಣಕ್ಕಿ, ಬಸವರಾಜ ಚಮಕೇರಿ, ರವಿ ಜವಳಗಿ,ಲಕ್ಷ್ಮಿ ಮುದ್ದಾಪುರ, ಸರಸ್ವತಿ ರಾಮೋಜಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net